ಬೆಂಗಳೂರು: ಕೇಂದ್ರ ರೈಲ್ವೆ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ದೂರುದಾರರು ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದು ದೂರು ದಾಖಲಿಸಿದ್ದಾರೆ. ಹೀಗಾಗಿ, ಅರುಣ್ ಸೋಮಣ್ಣಗೆ ಬಂಧನ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.
ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ಸಂಜಯನಗರದ ನಿವಾಸಿಗಳಾಗಿರುವ ದಂಪತಿಗೆ ಅರುಣ್ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಇದಾಗಿದೆ. ಸಂಜಯನಗರದ ಎಇಸಿಎಸ್ ಲೇಔಟ್ ನಿವಾಸಿ ತೃಪ್ತಿ ಹೆಗಡೆ ಮತ್ತು ಮಧ್ವರಾಜ್ ದಂಪತಿ ಈ ದೂರು ಸಲ್ಲಿಸಿದ್ದಾರೆ. ತೃಪ್ತಿ ಹೆಗಡೆ ದಂಪತಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ 37ನೇ ಚೀಫ್ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೂರು ದಾಖಲಿಸಿಕೊಳ್ಳಲು ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಪೊಲೀಸರು ಅರುಣ್ ಸೋಮಣ್ಣ, ಪ್ರಮೋದ್ ರಾವ್ ಮತ್ತು ಜೀವನ್ ಎಂಬುವರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಸಂಜಯನಗರ ಪೊಲೀಸರು ಅರುಣ್ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ,ಅಪಹರಣ ಮತ್ತಿತರ ಆರೋಪಗಳನ್ನು ಹೊರಿಸಿ ಎಫ್ ಐಆರ್ ದಾಖಲು ಮಾಡಿದ್ದಾರೆ. ಈ ಪ್ರಕರಣಗಳು ಜಾಮೀನು ರಹಿತ ಪ್ರಕರಣಗಳಾಗಿದ್ದು, ಅರುಣ್ ಮತ್ತು ಅವರ ಮತ್ತಿಬ್ಬರು ಸಂಗಡಿಗರು ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.