ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ರೈತರು ಪ್ರತಿಭಟನೆ ಭಾರತ್ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಅನ್ಯ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ್ಯಾದ್ಯಂತ ರೈತರು ಪ್ರತಿಭಟನೆ ನಡೆಸಿದರೂ, ಸಂಸತ್ ಹಾಗೂ ಶಾಸನ ಸಭೆಯಲ್ಲಿ ಚರ್ಚೆ ಮಾಡುತ್ತಿಲ್ಲ. ರೈತ ವಿರೋಧ ನೀತಿಗೆ ಖಂಡಿಸಿ ನಡೆಯುವ ಬಂದ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಬದುಕಲು ಬಿಡುತ್ತಿಲ್ಲ. ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಬೆಂಬಲ ಬೆಲೆ ಇಲ್ಲ. ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಬಂಡವಾಳ ಶಾಯಿಗಳಿಗೆ ಕೃಷಿ ಭೂಮಿ ಹಾಗೂ ರೈತರ ಜೀವನ ನೀಡುವ ಮೂಲಕ ರೈತರನ್ನು ಇನ್ನಷ್ಟು ನೋವಿಸುತ್ತಿದ್ದಾರೆ. ಕೃಷಿ ಕಾಯ್ದೆ ಬಗ್ಗೆ ದೇಶಾದ್ಯಂತ ವಿರೋಧವಿದ್ದರೂ, ಸರ್ಕಾರ ಹಠಮಾರಿತನ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರು, ಶಾಸಕರು ಸ್ವಯಂ ಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಅರ್ಜಿ ಹಾಕಿಕೊಂಡು ಪಕ್ಷ ಸೇರ್ಪಡೆ ಯಾಗುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಭೈರತಿ ಸುರೇಶ್ ಸೇರಿ ಮತ್ತಿತರರಿದ್ದರು.