ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಖ್ಯಾತ ಗಾಯಕ ಎಲ್.ಎನ್.ಶಾಸ್ತ್ರಿ(46) ಕೊನೆಯುಸಿರೆಳೆದಿದ್ದಾರೆ.
ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. 1996ರಲ್ಲಿ `ಅಜಗಜಾಂತರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 3 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಎಲ್.ಎನ್.ಶಾಸ್ತ್ರಿಯವರು ಧನಿಯಾಗಿದ್ದರು.
`ಜನುಮದ ಜೋಡಿ’ ಚಿತ್ರದ `ಕೋಲುಮಂಡೆ ಜಂಗಮದೇವ’ ಹಾಡಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಪಡೆದಿದ್ದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ವಿ.ಮನೋಹರ್ ರವರ ಜೊತೆ ಕೆಲಸ ಮಾಡಿದ್ದರು. 25ಕ್ಕೂ ಹೆಚ್ಚು ಚಿತ್ರಗಳಿಗೆ ಶಾಸ್ತ್ರಿಯವರು ಸಂಗೀತ ನಿರ್ದೇಶನ ಮಾಡಿದ್ದರು. ಶಾಸ್ತ್ರಿಯವರ ನಿಧನರಾದ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.