ಮೈಸೂರು:-ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ಇತ್ತೀಚೆಗೆ ಬಯಲಿಗೆ ಬಂದ ನಕಲಿ ನಂದಿನಿ ತುಪ್ಪ ತಯಾರಿಕೆ ಹಾಗೂ ಮಾರಾಟ ಜಾಲ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಗುರುವಾರ ನಗರದಲ್ಲಿ ರೈತರ ಸಂಘದಿAದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂದಿನಿ ಹಾಲು, ತುಪ್ಪ ಸೇರಿದಂತೆ ಅದರ ಉತ್ಪನ್ನಗಳು ಜನರ ವಿಶ್ವಾರ್ಹತೆಯನ್ನು ಹೊಂದಿವೆ. ಆದರೆ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾದ ನಕಲಿ ನಂದಿನಿ ತುಪ್ಪ ತಯಾರಿಕೆ ಹಾಗೂ ಮಾರಾಟ ಪ್ರಕರಣದಿಂದಾಗಿ ಜನರು ಅನುಮಾನದಿಂದ ನಂದಿನಿ ಉತ್ಪನ್ನಗಳನ್ನು ನೋಡುವಂತಾಗಿದೆ.
ನಂದಿನಿ ನಕಲಿ ತುಪ್ಪ ತಯಾರಿಕೆ ದಂಧೆಯಲ್ಲಿ ದಂಧೆಕೋರರೊoದಿಗೆ ಮೈಮುಲ್‌ನ ಕೆಲವು ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕೆಲವರು ಭಾಗಿಯಾಗಿರುವ ಅನುಮಾನಗಳುಂಟಾಗಿದೆ. ಈ ಕಲಬೆರಕೆ ದಂಧೆ ಬೇರೆ ಜಿಲ್ಲೆ, ರಾಜ್ಯಗಳಲ್ಲಿಯೂ ಕಾರ್ಯನಿರತವಾಗಿರುವ ಸಂಶಯವಿರುವ ಕಾರಣ, ಸರ್ಕಾರ ಈ ಪ್ರಕರಣದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಹಚ್ಚಿ, ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ, ಈ ಕಲಬೆರಕೆ ದಂಧೆ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಮಗಳಲ್ಲಿರುವ ಹಾಲು ಉತ್ಪಾಧಕ ಸಹಕಾರ ಸಂಘಗಳ ಮೂಲಕ ಸ್ಥಳೀಯವಾಗಿ ಕಚ್ಚಾ ಹಾಲು ಮಾರಾಟ ಮಾಡುವುದನ್ನು ಜನವರಿ 1 ರಿಂದ ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದಾಗಿ ಹಾಲು ಉತ್ಪಾಧಕರಿಗೆ ತೀವ್ರ ತೊಂದರೆಯಾಗಲಿದೆ. ಹಾಗಾಗಿ ನಿರ್ಬಂಧವನ್ನು ಹಿಂತೆಗೆದುಕೊಳ್ಳಬೇಕೆAದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಮಹಿಳಾಧ್ಯಕ್ಷೆ ನೇತ್ರಾವತಿ, ಮುಖಂಡರಾದ ಎಂ.ಎಸ್.ಅಶ್ವಥ್ ನಾರಾಯಣ ರಾಜೇ ಅರಸ್, ಪ್ರಸನ್ನ ಎನ್.ಗೌಡ, ಸರಗೂರು ನಟರಾಜ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.