ಬೆಂಗಳೂರು: ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಒಂದು ಆಕಸ್ಮಿಕ ಘಟನೆ ಎಂದಿರುವ ಗೃಹಸಚಿವ ಜಿ ಪರಮೇಶ್ವರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ನಾಗಮಂಗಲದಲ್ಲಿ ಅಂಗಡಿ ಮುಂಗಟ್ಟುಗಳು ಹತ್ತಿ ಉರಿದರೂ ಗೃಹಸಚಿವರು ಈ ಘಟನೆಯನ್ನು ಒಂದು ಆಕಸ್ಮಿಕ ಎಂದಿರುವುದು ಸಾರ್ವಜನಿಕರಿಂದ ಮತ್ತು ವಿಪಕ್ಷಗಳಿಂದ ಭಾರೀ ಟೀಕೆಗೊಳಗಾಗಿದೆ. ಇದೊಂದು ಆಕಸ್ಮಿಕ ಘಟನೆಯಾ? ನೀವೆಂಥಾ ಗೃಹಸಚಿವರು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇತ್ತ ವಿಪಕ್ಷ ನಾಯಕ ಆರ್ ಅಶೋಕ್ ಕೂಡಾ ನಾಗಮಂಗಲದಲ್ಲಿ ಇಷ್ಟೊಂದು ದೊಡ್ಡ ಗಲಾಟೆಯಾಗಿರುವಾಗ, ಒಂದು ಕೋಮಿನವರು ತಲ್ವಾರ್ ಹಿಡಿದು, ಪೆಟ್ರೋಲ್ ಬಾಂಬ್ ಸುರಿದರೂ ಅದನ್ನು ಆಕಸ್ಮಿಕ ಘಟನೆ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪರಮೇಶ್ವರ್ ಮತ್ತು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಹಿಂದೆ ಅರಗ ಜ್ಞಾನೇಂದ್ರ ಗೃಹಸಚಿವರಾಗಿದ್ದಾಗ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಘಟನೆಗಳಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡುತ್ತಿದ್ದರು. ಹಾಲಿ ಸಚಿವ ಪರಮೇಶ್ವರ್ ಕೂಡಾ ಅವರಿಗಿಂತ ಕಮ್ಮಿಯಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಅವರು ಕಠಿಣ ಕ್ರಮ ಎನ್ನುತ್ತಿದ್ದರು. ಇವರೀಗ ಆಕಸ್ಮಿಕ ಎನ್ನುತ್ತಿದ್ದು ಆಕಸ್ಮಿಕ ಗೃಹಸಚಿವರು ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ತಮ್ಮನ್ನು ಆಕಸ್ಮಿಕ ಗೃಹಸಚಿವರು ಎನ್ನುತ್ತಿರುವುದು ಪರಮೇಶ್ವರ್ ಗೂ ತಿಳಿದುಬಂದಿದ್ದು, ಹೌದ್ರೀ ನಾನು ಆಕಸ್ಮಿಕ ಗೃಹಸಚಿವ ಎಂದು ಕಿಡಿ ಕಾರಿದ್ದಾರೆ.