ಬೆಂಗಳೂರಿನಲ್ಲಿರುವ ಹೈದ್ರಾಬಾದ್-ಕರ್ನಾಟಕ ವಿಶೇಷ ಕೋಶದ ಪ್ರಾದೇಶಿಕ ಕಚೇರಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಲಬುರಗಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿಯಿಂದ ಆಯೋಜಿಸಿದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳ ಪರಿವೀಕ್ಷಣೆ ಕೈಗೊಂಡು ಗೌರವ ವಂದನೆ ಸ್ವೀಕರಿಸಿದ್ರು.
ಪ್ರಸ್ತುತ ಇರುವ 371(ಜೆ) ಕಲಂ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು ಈ ಭಾಗದವರಿಗೆ ನೇಮಕಾತಿ, ಮುಂಬಡ್ತಿ ಮತ್ತು ಇನ್ನಿತರ ಸವಲತ್ತು ಹೆಚ್ಚಿನ ರೀತಿಯಲ್ಲಿ ದೊರಕುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆದಿದ್ದು, ಅದಕ್ಕೆ ಪೂರಕವಾಗಿ ಹೈ.ಕ.ಕೋಶದ ಪ್ರಾದೇಶಿಕ ಕಚೇರಿಯನ್ನು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದ್ರು.
ಕಲ್ಯಾಣ ನಾಡಿನ ಶ್ರೀಮಂತ ಇತಿಹಾಸದ ಬಹಳಷ್ಟು ವಿಷಯಗಳು ರಾಜ್ಯದ ಮತ್ತು ದೇಶದ ಪಠ್ಯಪುಸ್ತಕದಲ್ಲಿ ಬಿಟ್ಟು ಹೋಗಿದೆ. ಬಿಟ್ಟು ಹೋದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗುವುದು. ಜೊತೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಧ್ಯಯನ ಪೀಠ ಸಹ ಸ್ಥಾಪಿಸಲಾಗುವುದು. ಇದರಿಂದ ಮುಂದಿನ ಪೀಳಿಗಿಗೆ ಕಳೆದು ಹೋದ ಇತಿಹಾಸ ಅರಿಯಲು ಪ್ರಯೋಜನವಾಗಲಿದೆ ಎಂದ್ರು.