ರಾಜ್ಯದ ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಸರ್ಕಾರದಿಂದ ಟ್ರಾಮಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.
ಟ್ರಾಮಾ ಕೇಂದ್ರಗಳ ಆರಂಭದಿಂದಾಗಿ ಬಡಜನರಿಗೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವೈದ್ಯರಿಗೆ ಟ್ರಾಮಾ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಟ್ರಾಮಾ ಹಾಗೂ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದ್ದೆ. ಅದರ ಫಲವಾಗಿ ಕಲಬುರಗಿಯಲ್ಲಿ ಟ್ರಾಮಾ ಸೆಂಟರ ಪ್ರಾರಂಭಿಸಲಾಗುತ್ತಿದೆ ಎಂದರು.
ಕಲಬುರಗಿಯ ಟ್ರಾಮಾ ಕೇಂದ್ರದ ಕಟ್ಟಡ ಪೂರ್ಣಗೊಂಡಿದೆ. ಕೇಂದ್ರಕ್ಕೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಟ್ರಾಮಾ ಕೇಂದ್ರಕ್ಕೆ ಬೇಕಾಗುವ ತಜ್ಞ ವೈದ್ಯರು ಹಾಗೂ ಇನ್ನಿತರೇ ಸಿಬ್ಬಂದಿಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದಲ್ಲಿ ಮುಂದಿನ 2-3 ತಿಂಗಳಲ್ಲಿ ಪೂರ್ಣ ಪ್ರಮಾಣದ ಟ್ರಾಮಾ ಸೆಂಟರ್ ಪ್ರಾರಂಭಗೊಳ್ಳುವುದು. ಈಗಾಗಲೇ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ 200 ಹಾಸಿಗೆಯ ಟ್ರಾಮಾ ಸೆಂಟರ್ ಪ್ರಾರಂಭಿಸಲಾಗಿದೆ. ಮೈಸೂರಿನಲ್ಲಿಯು ಸಹ ಪ್ರಾರಂಭಗೊಳ್ಳುವುದು ಎಂದು ಹೇಳಿದರು.
ಆಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ತುರ್ತು ಚಿಕಿತ್ಸಾ ವಿಭಾಗ ಪ್ರಾರಂಭಿಸಿದರೆ ಅನುಕೂಲವಾಗುವುದು ಎಂದರು.