ರಸ್ತೆ ಅಗಲಿಕರಣಕ್ಕಾಗಿ ರಸ್ತೆ ಅಗೆದು ಸರಿಪಡಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಿದ್ದಿರುವ ಹಳ್ಳಕೊಳ್ಳ ಹಾಗೂ ಧೂಳಿನಿಂದ ಕಂಗೆಟ್ಟ ಗ್ರಾಮಸ್ಥರು ರಸ್ತೆ ತಡೆದು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಹೊಸಕೋಟೆ- ಮಾಲೂರು ರಸ್ತೆಯಲ್ಲಿರುವ ಜಡಿಗೇನಗಳ್ಳಿ ಗ್ರಾಮದಲ್ಲಿ ಪ್ರತಿಭಟಿಸಲಾಗಿದೆ.
ಹೊಸಕೋಟೆ ಮಾಲೂರು ಮುಖಾಂತರ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.
ಕಳೆದ ಒಂದು ವರ್ಷದಿಂದ ರಸ್ತೆ ಅಗೆದು ಹಾಗೆ ಬಿಟ್ಟಿರೋ ಪರಿಣಾಮ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಧೂಳಿನಿಂದ ಉಸಿರಾಟದ ತೊಂದರೆ ಮತ್ತು ಅಲರ್ಜಿ ಸಮಸ್ಯೆಗಳಿಂದ ಗ್ರಾಮಸ್ಥರು ಬಳಲುವಂತಾಗಿದೆ.
ಹಲವು ಬಾರಿ ರಸ್ತೆ ಸರಿಡಿಸುವಂತೆ ಮನವಿ ಮಾಡಿದರೂ ಸರಿಪಡಿಸದೆ ನಿರ್ಲಕ್ಷ್ಯತೋರಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ಹಿನ್ನೆಲೆ ಹೊಸಕೋಟೆ ಮಾಲೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರ ಪರದಾಟ ನಡೆಸಿದರು.
ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾ ನಿರತ ಗ್ರಾಮಸ್ಥರ ಮನವೊಲಿಕೆಗೆ ಯತ್ನ ನಡೆಸಿದರು.