ಬೆಂಗಳೂರು : ಗೆದ್ದ ದಲಿತ ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂದು ಟ್ವೀಟರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ.
ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಹೀಗಿದ್ದರೂ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ನಾಯಕರು, ಮಾನ್ಯ ಟ್ವಿಟರ್ ರಾಮಯ್ಯನವರೇ, ದಲಿತರ ಮೇಲಿರುವ ನಿಮ್ಮ ಪ್ರೀತಿಯನ್ನು ಬರೀ ಟ್ವಿಟರ್ ಮೂಲಕ ತೋರಿಸಬೇಡಿ. ಜಿ.ಪರಮೇಶ್ವರ್ ಅವರು ದಲಿತರು ಎಂಬ ಕಾರಣಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದು ತಾವೇ ಎಂದು ರಾಜ್ಯದ ಜನತೆಗೆ ಗೊತ್ತಿದೆ. ದಲಿತರ ಮೇಲೆ ತಮಗೆ ನಿಜಕ್ಕೂ ಕಾಳಜಿ ಇದ್ದರೆ ಸೋತಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ತೋರಿಸಿ ಎಂದು ಸವಾಲೆಸಿದಿದ್ದಾರೆ.