ಫೋಟೋ ಶೂಟ್ ಗೆ ಬಂದು ಹೋಗುವುದು ಬೇಡ, ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕುರಿತು ಮಾಹಿತಿಯನ್ನೇ ಇದುವರೆಗೂ ಸರಕಾರ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ, ಹೆಬ್ಬಾಳ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ ಡಿಕೆ, ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ? ಸರ್ಕಾರ ಹಾಗೂ ಕಾರ್ಪೊರೇಷನ್ ನಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಲೂಟಿಯಾಗುತ್ತಿದೆ ಅಷ್ಟೇ ಎಂದು ಆರೋಪಿಸಿದರು.
ಕಾಮಗಾರಿ ನೋಡಿದರೆ ಅದು ಗುಣಾತ್ಮಕವಾಗಿ ಆಗಿಲ್ಲ ಅನ್ನಿಸುತ್ತದೆ. ರಾಜಕಾರಣದಲ್ಲಿ ಶ್ರೀಮಂತಿಕೆ ಇರುವವರು ಇದ್ದಾರೆ. ಆ ರಾಜಕಾರಣಿಯಿಂದ ಜನರು ಸಮಸ್ಯೆ ಎದುರಿಸುತ್ತಾರೆ ಎಂದು ದೂರು ಬಂದಿವೆ. ಪ್ರಮುಖ ಮತ್ತು ಪ್ರಭಾವೀ ರಾಜಕಾರಣಿಗಳು ಈ ಜಾಗದಲ್ಲಿ ಕಾಂಪೌಂಡ್ ಹಾಕಿದ್ದೇ ವಸತಿ ಸಮುಚ್ಚಯಕ್ಕೆ ನೀರು ನುಗ್ಗಲು ಕಾರಣ. ಅವರು ತಮ್ಮ ಹಿತ ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕೆ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
ಜನರು ಸಾಲ ಮಾಡಿ ಇಲ್ಲಿ ಪ್ಲ್ಯಾಟ್ ಖರೀದಿಸಿ ವಾಸ ಮಾಡ್ತಿದ್ದಾರೆ. ಅಧಿಕಾರಿಗಳು ಅನುಮತಿ, ಕೊಡುವ ಮೊದಲೇ ಯೋಚನೆ ಮಾಡಬೇಕಿತ್ತು. ಹವಾಮಾನ ಇಲಾಖೆ ಮಳೆ ಜೋರಾಗಿ ಬರುತ್ತದೆ ಅಂದಾಗ ಅಧಿಕಾರಿಗಳು ಮಳೆ ಬರಲ್ಲ ಎಂದು ನಿರ್ಲಕ್ಷ್ಯ ಮಾಡಿದರು. ಯಾವೆಲ್ಲಾ ಭಾಗದಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಪರಿಹಾರ ನೀಡಬೇಕು. ಮೊದಲು ಫೆಬ್ರವರಿಯಲ್ಲಿ ಬರುವ ಮಳೆಗೆ ಬಹಳಷ್ಟು ತೊಂದರೆ ಆಗ್ತಿತ್ತು. ಸರ್ಕಾರ ತಾತ್ಕಾಲಿಕವಾಗಿ ಮಳೆ ನುಗ್ಗದ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.