ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಗೆ ಜೆಡಿಯು (ಎಸ್) ನ ಏಳು ಬಂಡಾಯ ಶಾಸಕರು ಸೇರಿದಂತೆ ಯಾರಿಗೂ ಪಕ್ಷದ ಟಿಕೆಟ್ ನೀಡುವ ಭರವಸೆ ಕೊಡಬೇಡಿ. ಪಕ್ಷದಲ್ಲಿನ ಹಲವು ಹೊಸ ಮುಖಗಳನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಆಗಸ್ಟ್ 16 ರಂದು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂತರ ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ಕೊಡುವ ಭರವಸೆ ನೀಡಿದೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಯಾರೊಬ್ಬರಿಗೂ ಅಂತಹ ಭರವಸೆ ನೀಡಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿಕೆಯನ್ನು ತಳ್ಳಿಹಾಕಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಉಪಸ್ಥಿತರಿದ್ದ ಸಭೆಯಲ್ಲಿ ರಾಹುಲ್ ಗಾಂಧಿ, ಜೆಡಿಸ್ ರೆಬೆಲ್ ಶಾಸಕರ ಹಿತಾಸಕ್ತಿಯನ್ನು ರಕ್ಷಿಸಲಾಗುವುದು. ಆದರೆ, ಇದರರ್ಥ ಪಕ್ಷದ ಟಿಕೆಟ್ ಕೊಡುತ್ತೇವೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಸೆಂಬ್ಲಿ ಚುನಾವಣೆ ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ, ಕಾಂಗ್ರೆಸ್ ಪಕ್ಷವು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಿದೆ. ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ಜನಪ್ರಿಯತೆಯನ್ನು ಅಳೆಯಲು ಎಲ್ಲಾ ಕ್ಷೇತ್ರಗಳಲ್ಲಿ ಸಮೀಕ್ಷೆಯನ್ನು ನಡೆಸಲು ಹೈಕಮಾಂಡ್ ಚಿಂತನೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಜನತಾ ಪರಿವಾರದ ನಾಯಕರಿಗೆ ಪ್ರಾಮುಖ್ಯತೆಯನ್ನು ಕೊಡುವುದರಿಂದ ಜೆಡಿಎಸ್ ಬಂಡಾಯ ಶಾಸಕರಿಗೆ ಟಿಕೆಟ್ ನೀಡಿದಲ್ಲಿ ನಿಷ್ಠಾವಂತ ಕಾಂಗ್ರೆಸ್ ಮುಖಂಡರಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.