ವ್ಯಾಲೆಂಟೈನ್ಸ್ ಡೇ ಪ್ರತಿಭಟನೆಯಲ್ಲಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಭಾರತ್ ಹಿಂದೂ ಮುಖಂಡರು ನಾಯಿ ಮತ್ತು ಕತ್ತೆಯ ಮದುವೆಯನ್ನು ಮಾಡಿಸಿದ್ದು ಚೆನ್ನೈ ಪೊಲೀಸರು ಈ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೆನ್ನೈನ ಚೂಲೈ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಯಿ ಮತ್ತು ಕತ್ತೆಯ ಹಣೆಗೆ ಅರಿಶಿಣವನ್ನು ಹಚ್ಚಿ ಶೃಂಗರಿಸಿ ಅವುಗಳ ಮೇಲೆ ಹೂವಿನ ಮಳೆಯನ್ನು ಸುರಿಸುವ ಮೂಲಕ ಪ್ರೇಮಿಗಳ ದಿನಕ್ಕೆ ತಮ್ಮ ವಿರೋಧವನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ಕಾರ್ಯಕರ್ತರು ವ್ಯಾಲಂಟೈನ್ಸ್ ಡೇ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದ್ದರು ಇದರಿಂದ ಸ್ವಲ್ಪ ಗೊಂದಲ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಿಂದೂ ವಿವಾಹಗಳ ಆಚರಣೆಯಲ್ಲಿ ನಡೆಸುವಂತೆ ಹಲವು ವಸ್ತುಗಳಿಂದ ತುಂಬಿದ ಬುಟ್ಟಿಗಳನ್ನು ಮಹಿಳೆಯರು ಹೊತ್ತಿರುವುದು ವಿಶೇಷವಾಗಿತ್ತು. ಅಷ್ಟೇ ಅಲ್ಲ ಬಜರಂಗ ದಳದ ಸದಸ್ಯರು ಅಹಮದಾಬಾದ್‍ನ ಸಬರಮತಿ ನದಿ ಮುಂಭಾಗದಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡಿರುವುದು ವರದಿಯಾಗಿದ್ದು, ಹೈದರಾಬಾದ್‌ನಲ್ಲಿಯೂ ಸಹ ಬಜರಂಗದಳದ ಸದಸ್ಯರು ವ್ಯಾಲಂಟೈನ್ಸ್ ಡೇ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದು ಪ್ರತಿಭಟನೆ ಮತ್ತು ಕಿರುಕುಳ ನೀಡಿರುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.