ಉಸಿರಾಟದ ತೊಂದರೆ ಇರುವವರಿಗೆ ಹಾಗೂ ಜ್ವರ ಕಾಣಿಸಿಕೊಂಡವರಿಗೆ ಚಿಕಿತ್ಸೆಕೊಡಬಾರದು ಅಂತ ಡಿಸಿ ಖಡಕ್ ಸೂಚನೆ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಹೋಮಿಯೋಪತಿ, ಆಯುರ್ವೇದ ಮತ್ತು ಯುನಾನಿ ಚಿಕಿತ್ಸಾಲಯಗಳು ಹಾಗೂ ಆಸ್ಪತ್ರೆಗಳು ಎಸ್ಎಆರ್ ಐ (ತೀವ್ರವಾದ ಉಸಿರಾಟದ ಸೋಂಕುಗಳು) ಮತ್ತು ಐಎಲ್ಐ (ಅನಾರೋಗ್ಯದಂತಹ ಶೀತಜ್ವರ) ಪ್ರಕರಣಗಳಿಗೆ ಚಿಕಿತ್ಸೆ ನೀಡಬಾರದು. ಅವರು ಈ ಪ್ರಕರಣಗಳ ಬಗ್ಗೆ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.
ಇಂತಹ ಪ್ರಕರಣಗಳ ಕುರಿತು ವರದಿ ಮಾಡದೇ ನಿರ್ಲಕ್ಷ್ಯ ತೋರಿದರೆ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸಾಂಕ್ರಾಮಿಕ ರೋಗ ತಡೆ ಕಾಯ್ದೆ -1897 ರ ಪ್ರಕಾರ ಕರ್ತವ್ಯ ಲೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.