ರಾಜ್ಯದ ಆದ್ಯತೆ ಮತ್ತು ಸಾಮಾನ್ಯ ಕುಟುಂಬದ ಸದಸ್ಯರಿಗೆ ಶೀಘ್ರ ಮತ್ತು ಶುಲ್ಕ ರಹಿತ ಚಿಕಿತ್ಸೆಗಾಗಿ ಜಾರಿಗೆ ಬಂದಿರುವ ಯೋಜನೆಯೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಾಗಿದೆ. ಇದರಿಂದ ನೀವು ಉಚಿತ ಚಿಕಿತ್ಸೆ ಪಡೆಯಬಹುದು.
ಆದರೆ ಈ ಯೋಜನೆಯಿಂದ ಚಿಕಿತ್ಸೆ ಪಡೆಯೋದಕ್ಕೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಜೊತೆಗೆ, ಪಡಿತರ ಮತ್ತು ಆಧಾರ್ ಒದಗಿಸುವಂತೆ ಆಸ್ಪತ್ರೆಗಳಲ್ಲಿ ಕೇಳುತ್ತಿದ್ದಾರೆ. ಹಾಗಾಗಿ ಗುರುತಿನ ಚೀಟಿ ಇದ್ದರೆ ಮಾತ್ರ ಸಾಕು, ಚಿಕಿತ್ಸೆಗೆ ಮತ್ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ ಎಂಬುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಸುವರ್ಣ ಆರೋಗ್ಯ ಸುರಕ್ಷಾ ವಿಶ್ವಸ್ಥ ಮಂಡಳಿಯ ಕಾರ್ಯಕಾರಿ ನಿರ್ದೇಶಕರು ಜಂಟಿ ಸುತ್ತೋಲೆ ಹೊರಡಿಸಿದ್ದು, ಈ ಮೊದಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಯನ್ನು ವಿತರಿಸದ ಕಾರಣ, ಆದ್ಯತಾ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ನೀಡೋದಕ್ಕೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಗಳನ್ನು ಗುರುತಿಗಾಗಿ ಬಳಕೆ ಮಾಡಲು ತಿಳಿಸಲಾಗಿತ್ತು.
ಈಗಾಗಲೇ ರಾಜ್ಯದಲ್ಲಿ ಆಯುಷ್ಮಾನ್ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸುಮಾರು 1.5 ಕೋಟಿ ಗುರುತಿನ ಚೀಟಿಗಳನ್ನು ಪಲಾನುಭವಿಗಳಿಗೆ
ವಿತರಿಸಲಾಗಿರುತ್ತದೆ. ಚಿಕಿತ್ಸೆಗಾಗಿ ಫಲಾನುಭವಿಗಳು ಆಸ್ಪತ್ರೆಗಳಿಗೆ ಆಗಮಿಸಿದಾಗ ಮತ್ತು ಒಳರೋಗಿಗಳಾಗಿ ದಾಖಲಿಸಿಕೊಂಡು ಬಳಸುವಂತೆ ತಿಳಿಸಲಾಗಿದೆ.
ಆದರೆ ಕೆಲ ಆಸ್ಪತ್ರೆಗಳಲ್ಲಿ ಗುರುತಿನ ಚೀಟಿ ನೀಡಿದ್ದರೂ ಸಹ ಪೂರಕ ದಾಖಲೆಯಾಗಿ ಪಡಿತರ ಮತ್ತು ಆಧಾರ್ ಚೀಟಿಗಳನ್ನು ಒದಗಿಸುವಂತೆ ಒತ್ತಾಯಿಸುತ್ತಿರೋದಾಗಿ ರೋಗಿಗಳು ಹೇಳುತ್ತಿದ್ದಾರೆ.
ಅಲ್ಲದೇ ರಾಜ್ಯದ ಕೆಲವು ಆಸ್ಪತ್ರೆಗಳು ಕಾರ್ಡ್ ಹೊಂದಿದ್ದರೂ ಪೂರಕ ದಾಖಲೆಗಳನ್ನು ಕೇಳಿ ಅನಾನುಕೂಲ ಉಂಟು ಮಾಡುತ್ತಿರೋದು ಗಮನಕ್ಕೆ ಬಂದಿರುತ್ತಿದೆ. ಈ ಹಿನ್ನಲೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದಾಗ ಆರೋಗ್ಯ ಮಿತ್ರರು, ಧನಬೇಡಿಕೆ ನಿರ್ವಾಹಕರು, ಆಸ್ಪತ್ರೆಯಲ್ಲಿರುವ ಯಾವುದೇ ಸಿಬ್ಬಂದಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸುವುದನ್ನು ನಿಷೇಧಿಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಒಂದು ವೇಳೆ ಗುರುತಿನ ಚೀಟಿ ಇಲ್ಲದೇ ಇರುವ ಅರ್ಹ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದಾಗ ಅವರ ಬಳಿ ಲಭ್ಯವಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಗಳ ಆಧಾರದ ಮೇಲೆ ದಾಖಲಿಸಿಕೊಂಡು, ಶುಲ್ಕ ರಹಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದು. ಒಂದು ವೇಳೆ ಗುರುತಿನ ಚೀಟಿ ಇನ್ನೂ ಪೂರಕ ದಾಖಲೆಗಳನ್ನು ಒದಗಿಸುವಂತೆ ಕೋರಿದಲ್ಲಿ ಅಂತಹ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.