ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಕೈವಾಡವಿದೆ ಎನ್ನುವುದಕ್ಕೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಬಳಿ ಸಾಕ್ಷಿ ಇದೆಯೇ? ಕೇವಲ ರಾಜಕೀಯ ಬೇಳೆ ಬೇಯಸಿಕೊಳ್ಳಲು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿಯುತ ವಾತಾವರಣವಿರುವುದನ್ನು ಸಹಿಸಿದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಕೋಮುಗಲಭೆಗಳ ಮೂಲಕ ಅಶಾಂತಿ ನಿರ್ಮಿಸಲು ಹೊರಟಿದ್ದಾರೆ. ಆದರೆ, ಜನತೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ರೋಷನ್ ಬೇಗ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆರೋಪಕ್ಕೆ ಯಾವುದಾದರೂ ಸಾಕ್ಷ್ಯ ಬೇಕಲ್ಲವೇ? ಕೇವಲ ಹೇಳಿಕೆಗಳನ್ನು ನೀಡಿ ಸೌಹಾರ್ದತೆ ಕೆಡಿಸುವುದು ಕೀಳು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ.
ದಲಿತ ವಿರೋಧಿ ಬಿಜೆಪಿ ಇದೀಗ ಅಂಬೇಡ್ಕರ್ ಅವರ ಹೆಸರನ್ನು ಹೇಳುತ್ತಿದೆ. ಎಸ್ಸಿ, ಎಸ್ಟಿ ಯುವ ಮೋರ್ಚಾ ಸಭೆಗಳನ್ನು ಮಾಡುತ್ತಿದ್ದಾರೆ ಇದೆಲ್ಲಾ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯಂತಹ ಕೋಮುವಾದಿಗಳ ಕೈಗೆ ಅಧಿಕಾರ ಕೊಟ್ಟಲ್ಲಿ ರಾಜ್ಯವನ್ನು ಅಶಾಂತಿಯ ತಾಣವಾಗಿಸುತ್ತಾರೆ. ಜನತೆ ಬಿಜೆಪಿಯ ಸಂಚು ಚೆನ್ನಾಗಿ ಅರಿತಿದ್ದಾರೆ. ಇಂತಹ ವರ್ತನೆ ಯಾವುದೇ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ