4ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ಮಧ್ಯೆ 3 ದಿನಗಳಿಂದ ಹೊರಗೆ ಕಾಣಿಸಿಕೊಳ್ಳದ ಸಚಿವ ಡಿ.ಕೆ. ಶಿವಕುಮಾರ್ ಇವತ್ತು ಬಾಲ್ಕನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕಡೆ ಕೈಬೀಸಿದ್ದಾರೆ.
ಬೆಳಗ್ಗೆ 6.30ರ ಸುಮಾರಿಗೆ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಡಿ.ಕೆ. ಶಿವಕುಮಾರ್ ಅಭಿಮಾನಿಗಳತ್ತ ಕೈಬೀಸಿದ್ದಾರೆ. 4 ದಿನಗಳಿಂದ ಮನೆ ಮುಂದೆಯೇ ಕುಳಿತಿರುವ ಅಭಿಮಾನಿಗಳ ನೋಡಿದ ಶಿವಕುಮಾರ್, ತೆರಳುವಂತೆ ಕೈಬೀಸಿ ಸೂಚಿಸಿದ್ದಾರೆ. ಬಳಿಕ ಎಂದಿನಂತೆ ಒಳಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. ಡಿ.ಕೆ. ಶಿವಕುಮಾರ್ ನಿವಾಸದಲ್ಲಿನ ತನಿಖೆ ಬಹುತೇಕ ಮುಗಿದಿದ್ದು, ಇವತ್ತು ಐಟಿ ಅಧಿಕಾರಿಗಳು ತೆರಳಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ.
ಇತ್ತ, ಮೈಸೂರಿನಲ್ಲಿರುವ ಡಿ.ಕೆ. ಶಿವಕುಮಾರ್ ಮಾವ ತಿಮ್ಮಯ್ಯನವರ ಮನೆಯಲ್ಲೂ 4ನೇ ದಿನವೂ ತನಿಖೆ ಮುಂದುವರೆದಿದೆ. ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ನಿವಾಸದಲ್ಲೂ ತನಿಖೆ ಮುಂದುವರೆದಿದೆ. ನವದೆಹಲಿಯ 3 ನಿವಾಸಗಳ ಪೈಕಿ 2ರಲ್ಲಿ ವಿಚಾರಣೆ ಮುಗಿದಿದ್ದು, ಉಳಿದ ಒಂದು ನಿವಾಸದಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಡಿಕೆಶಿ ಆಪ್ತ, ಕರ್ನಾಟಕ ಭವನದ ಉದ್ಯೋಗಿ 3 ದಿನಗಳಿಂದ ಕೆಲಸಕ್ಕೆ ಹಾಜರಾಗಿಲ್ಲ, ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಮಾಧ್ಯಮಗಳ ವರದಿ ಉಲ್ಲೇಖಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕರ್ನಾಟಕ ಭವನದಿಂದ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ