ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಎಲ್ಲವೂ ನನಗೆ ಗೊತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:
'ಕುಮಾರಸ್ವಾಮಿ ಅವರು ಬಹಳ ಹಿರಿಯರು, ಬುದ್ಧಿವಂತರು ಹಾಗೂ ಸಾಹಿತಿಗಳಿದ್ದಾರೆ, ಅವರಿಗೆ ರಾಜಕಾರಣದಲ್ಲಿ ಬಹಳ ಅನಭವವಿದೆ.
ನಾಡ ಹಿತಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ನಮ್ಮ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕುಮಾರಸ್ವಾಮಿ ಅವರ ಟ್ವೀಟ್ ಟೀಕೆಗೆ ನಾವು ಉತ್ತರ ನೀಡಬೇಕಾಗುತ್ತದೆ. ಅವರ ಮಾತಿನಲ್ಲಿ ಸಾಹಿತ್ಯದ ಶಬ್ಧಕೋಶವೇ ಅಡಗಿದ್ದು, ನಾನು ಅದನ್ನು ಕಲಿತುಕೊಳ್ಳುತ್ತೇನೆ. ರಾಜಕೀಯದಲ್ಲಿ ಗೆಲವು, ಸೋಲು ಸಹಜ. ಅದರಿಂದ ಅನುಭವ ಬರುತ್ತದೆ. ಅವರು ಟೀಕೆ ಮಾಡಲಿ. ಆದರೆ ಆಶ್ಚರ್ಯ ಎಂದರೆ, ಚನ್ನಪಟ್ಟಣದಲ್ಲಿ ಫೈರಿಂಗ್ ಆಯ್ತು ಎಂದು ಎಸ್.ಎಂ. ಕೃಷ್ಣ ಅವರ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಿದರು. ಗಂಗಾಧರಮೂರ್ತಿ ಕೊಲೆ ಪ್ರಕರಣ ಸಂಬಂಧ ಪಾದಯಾತ್ರೆ ಮಾಡಿದರು. ತಲೆ ಮೇಲೆ ಸೀಮೆಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಪಾದಯಾತ್ರೆ ಮಾಡುತ್ತಿದೆ. ಮಾಜಿ ಪ್ರಧಾನಿ ಚಂದ್ರಶೇಖರ್, ದೇವೆಗೌಡರು ಮಾಡಿದ್ದಾರೆ. ಬಿಜೆಪಿಯವರು ರಥಯಾತ್ರೆ ಮಾಡಿದ್ದಾರೆ. ನೆರೆರಾಜ್ಯದ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ಮಾಡಿದ್ದಾರೆ. ದೇಶದ ರೈತರು ಕೂಡ ಹೋರಾಟ ಮಾಡಿದ್ದಾರೆ. ಇವೆಲ್ಲ ಹೋರಾಟಗಳ ಮೈಲಿಗಲ್ಲು. ಕೆಲವಕ್ಕೆ ಫಲ ಸಿಕ್ಕರೆ, ಕೆಲವಕ್ಕೆ ಸಿಕ್ಕಿಲ್ಲ. ಎಲ್ಲರಿಗೂ ಫಲ ಸಿಗಬೇಕು ಎಂಬುದಿಲ್ಲ.