ದಿ ವಿಲನ್ ಚಿತ್ರದಲ್ಲಿ ಕುರುಡುತನದ ಬಗ್ಗೆ ಕನಿಷ್ಟವಾಗಿಸುವಂತೆ ಹಾಡಿನಲ್ಲಿ ಪದ ಬಳಸಲಾಗಿದೆ ಎಂದು ಅಂಗವಿಕಲರು ಹಾಗೂ ಸಂಘಟನೆಗಳ ಸದಸ್ಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಅಂಗವಿಕಲರನ್ನು ಮಾನವೀಯತೆಯಿಂದ ಕಾಣುವ ಬದಲು ಹೀಯಾಳಿಸಲಾಗುತ್ತದೆ. ದಿ ವಿಲನ್ ಚಿತ್ರದಲ್ಲಿ ಕುರುಡುತನದ ಬಗ್ಗೆ ಕನಿಷ್ಟವಾಗಿಸುವಂತೆ ಹಾಡಿನಲ್ಲಿ ಪದ ಬಳಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಸಂಘದ ಸಂಚಾಲಕ ಪ್ರವೀಣ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲು ಅಂಗವಿಕಲರ ಸಂಘಟನೆ ಬಲಪಡಿಸಲಾಗುತ್ತಿದೆ. ಅಂಗವಿಕಲರಿಗೆ ಸರ್ಕಾರ ಮೀಸಲಿಟ್ಟಿರುವ ಸಮಲತ್ತುಗಳು ಅರ್ಹ ಅಂಗವಿಕಲರಿಗೆ ಸಿಗುತ್ತಿಲ್ಲ. ಪ್ರತಿಯೊಂದು ಇಲಾಖೆಯಲ್ಲಿಯೂ ಅಂಗವಿಕಲರನ್ನು ಶೋಷಣೆಗೆ ಒಳಪಡಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗವಿಕಲರು ಈ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಜೀವನ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ದಿ ವಿಲನ್ ಚಿತ್ರದಲ್ಲಿನ ಹಾಡೊಂದರಲ್ಲಿ ಅಂಗವಿಕಲರನ್ನು ಹೀಯಾಳಿಸಲಾಗಿದೆ. ಕುರುಡ ಕುರುಡ ಎಂದು ಹಾಡಿನಲ್ಲಿ ಮೂರು ಸಾರಿ ಶಬ್ದ ಬಳಸಲಾಗಿದೆ. ಇದು ಅಂಗವಿಕಲರನ್ನು ಕನಿಷ್ಠವಾಗಿ ಕಂಡಂತಾಗಿದೆ. ಇದನ್ನು ಜಿಲ್ಲೆಯ ಅಂಗವಿಕಲರು ವಿರೋಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.