ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಅವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ (ಇಂದು) ನಡೆಯಲಿದ್ದು, ಆದರೆ ಜಾಮೀನು ಕೋರಿ ನಲಪಾಡ್ ಸಲ್ಲಿಸಿರುವ ಅರ್ಜಿಯಲ್ಲಿ ವಿರೋಧ ಪಕ್ಷ ಹಾಗು ಮಾಧ್ಯಮಗಳ ಮೇಲೆ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರೌಡಿ ನಲಪಾಡ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ,’ ರಾಜಕೀಯ ಮೈಲೇಜ್‍ಗಾಗಿ ಶತ್ರುಗಳು ಈ ರೀತಿ ಮಾಡಿದ್ದಾರೆ. ಚುನಾವಣಾ ಸಮಯವಾದ್ದರಿಂದ ನನ್ನನ್ನು ಸೋಲಿಸಲು ಈ ರೀತಿಯ ಕುತಂತ್ರ ಮಾಡಲಾಗಿದೆ. ಇದರಿಂದ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಪ್ರತಿಪಕ್ಷಗಳು ಹುನ್ನಾರ ಮಾಡಿವೆ. ಮಾಧ್ಯಮಗಳು ಅನಾವಶ್ಯಕವಾಗಿ ಇದನ್ನು ಹೈಪ್ ಮಾಡಿದೆ ಎಂದು ಹೇಳಿದ್ದಾರೆ.
ನನ್ನ ಮೇಲೆ ದೂರು ದಾಖಲಿಸಿರುವುದು ಸುಳ್ಳು ಕೇಸ್. ಆಧಾರ ರಹಿತವಾದ, ರಾಜಕೀಯ ದುರುದ್ದೇಶದಿಂದ ಕೇಸ್ ದಾಖಲಿಸಲಾಗಿದೆ. ನನ್ನ ಹಾಗೂ ತಂದೆಯ ಏಳಿಗೆ ಸಹಿಸದವರು ಆಧಾರ ರಹಿತ ಕೇಸ್ ದಾಖಲಿಸಿದ್ದಾರೆ. 10 ರಿಂದ 15 ಜನ ಹಲ್ಲೆ ಅಂತಿದೆ. ನಾನೇ ಹಲ್ಲೆ ಮಾಡಿದ್ದೇನೆ ಅಂತಿಲ್ಲ. ಹೀಗಾಗಿ ಜಾಮೀನು ನೀಡಬೇಕು’ ಎಂದು ತಿಳಿಸಿದ್ದಾರೆ.
ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಗೆ ಜೈಲಾ? ಬಿಡುಗಡೆಯ ಭಾಗ್ಯ ಸಿಗುತ್ತದಾ ಎಂದು ಇಂದು ಕಾದು ನೋಡಬೇಕಿದೆ.
ಇಂದು ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಕೋರ್ಟ್ ನಲಪಾಡ್ ಮತ್ತು ಸ್ನೇಹಿತರಿಗೆ ಬಿಡುಗಡೆಯ ಭಾಗ್ಯ ನೀಡುತ್ತಾ ಎಂಬ ಕುತೂಹಲ ಮೂಡಿದೆ.
ಮೂಲಗಳ ಪ್ರಕಾರ ಕೋರ್ಟ್ ಇಂದು ಜಾಮೀನು ನೀಡುವ ಸಾಧ್ಯತೆ ಕಡಿಮೆಯಿದ್ದು, ಮುಂದಿನ ವಾರಕ್ಕೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅತ್ತ ಶಾಸಕ ಹ್ಯಾರಿಸ್ ಪುತ್ರನಿಗೆ ಜಾಮೀನು ಕೊಡಿಸಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದು, ವಿದ್ವತ್ ಪೋಷಕರ ಜತೆ ಸಂಧಾನ ನಡೆಸಿ ವಿಫಲರಾಗಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಮೊಹಮ್ಮದ್ ನಲಪಾಡ್ ಮತ್ತೊಂದು ವಿವಾದಕ್ಕೆ ಕಾರಣನಾಗಿದ್ದಾನೆ.
ಜೈಲಿನಲ್ಲಿ ನಿನ್ನೆಯಿಂದ ನಲಪಾಡ್ ಫೋನ್ ಬಳಸುತ್ತಿದ್ದಾನೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ನಿನ್ನೆ ಮಧ್ಯರಾತ್ರಿವರೆಗೂ ತನ್ನ ಕುಟುಂಬದವರ ಜತೆಗೆ ಮಾತನಾಡಿದ ಮೊಹಮ್ಮದ್, ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ಮಾತನಾಡಿದನೆಂದು ವಾಹಿನಿ ವರದಿ ಮಾಡಿದೆ.
ಆದರೆ ಮೊಹಮ್ಮದ್ ಗೆ ಅಕ್ರಮವಾಗಿ ಫೋನ್ ಬಳಸಲು ಅನುವು ಮಾಡಿಕೊಟ್ಟವರು ಯಾರೆಂದು ತಿಳಿದುಬಂದಿಲ್ಲ. ನಿನ್ನೆ ಆರೋಪಿಗಳಿಗೆ ಮನೆ ಊಟ ನೀಡಲಾಗಿತ್ತು. ಈ ಊಟದ ಜತೆಗೆ ಗುಪ್ತವಾಗಿ ಮೊಬೈಲ್ ಸಾಗಿಸಿರಬಹುದೇ ಎಂದು ವಾಹಿನಿ ವರದಿ ಶಂಕಿಸಿದೆ. ಅಂತೂ ವಿಐಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿ ಆತಿಥ್ಯ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ವಿದ್ವತ್ ಜತೆ ಸಂಧಾನಕ್ಕೆ ಹೋದ ಹ್ಯಾರಿಸ್ ಸಪ್ಪೆ ಮುಖ ಹಾಕಿಕೊಂಡು ಬಂದಿದ್ಯಾಕೆ…?
ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಜೊತೆ ಸಂಧಾನಕ್ಕೆಂದು ಶಾಸಕ ಹ್ಯಾರಿಸ್ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಸಂಧಾನ ಯಶಸ್ವಿಯಾಗದ ಕಾರಣದಿಂದ ಬರಿಗೈಯಲ್ಲಿ ವಾಪಾಸಾಗಿದ್ದಾರೆ.
ಶಾಸಕ ಹ್ಯಾರಿಸ್ ಅವರು ವಿದ್ವತ್ ತಂದೆ ಲೋಕನಾಥ್ ಅವರ ಜೊತೆ ಮಾತುಕತೆ ನಡೆಸಿ, ‘ಕೋರ್ಟ್ ನಲ್ಲಿ ಅಬ್ಜೆಕ್ಷನ್ ಹಾಕಬೇಡಿ. ನನ್ನ ಮಗನಿಗೆ ಬೇಲ್ ಸಿಗೋದಿಲ್ಲ. ಏನೋ ಮಕ್ಕಳು ಹೊಡೆದಾಡಿಕೊಂಡಿದ್ದಾರೆ, ಬುದ್ದಿ ಹೇಳೋಣ. ಕಳೆದ ಮೂರು ದಿನಗಳಿಂದ ಸತ್ತು ಬದುಕುತ್ತಿದ್ದೇನೆ’ ಎಂದು ಗೋಳಾಡಿದ್ದಾರೆ. ಆದರೆ ಸಂಧಾನಕ್ಕೆ ಮಣಿಯದ ಲೋಕನಾಥ್ ಅವರು ಡಾಕ್ಟರ್ ಕರೆದ್ರು ಎಂತಾ ಎದ್ದು ಹೋದ ಕಾರಣ ಹ್ಯಾರಿಸ್ ಅವರು ಸಪ್ಪೆ ಮೋರೆ ಹಾಕಿಕೊಂಡು ಹೊರಗೆ ನಡೆದಿದ್ದಾರೆ.