ಬೆಂಗಳೂರು, ಸೆ.9 : ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೋರಿದ್ದಾರೆ. ಕೊರೊನಾ ಮಹಾಮಾರಿಯ ಸಂಕಷ್ಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆತಂಕ ಮತ್ತು ಭಯ ಮನೆ ಮಾಡಿರುವ ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಗೌರಿ ಮತ್ತು ಗಣೇಶ ಹಬ್ಬ ಆಚರಿಸುತ್ತಿದ್ದೇವೆ. ಭಕ್ತಿ, ಸಂಭ್ರಮದಿಂದ ಆಚರಿಸಬೇಕಾಗಿದ್ದ ಹಬ್ಬಕ್ಕೆ ಕಾರ್ಮೋಡ ಕವಿದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ತಿಕರ ಶ್ರದ್ಧೆ ಕಡಿಮೆಯಾಗಿಲ್ಲ. ಸರ್ವಮಂಗಳ ಮಾಂಗಲ್ಯೆ ಆದ ಗೌರಿ ಮತ್ತು ವಿಘ್ನ ನಿವಾರಕ ಗಣೇಶ ಈ ಸಂಕಷ್ಟದಿಂದ ನಮ್ಮ ರಾಷ್ಟ್ರ ಮತ್ತು ನಾಡನ್ನು ಪಾರು ಮಾಡಲಿ ಎಂದು ಗೌಡರು ಪ್ರಾರ್ಥಿಸಿದ್ದಾರೆ.
ರಾಜ್ಯದ ಸಮಸ್ತ ಜನತೆಗೆ ಆರೋಗ್ಯ ಭಾಗ್ಯ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಹಬ್ಬದ ಆಚರಣೆ ಉತ್ಸಾಹದಲ್ಲಿ ಉದಾಸೀನ ಬೇಡ. ಎಲ್ಲರೂ ಕೊರೊನಾ ನಿವಾರಕ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೆ ಪಾಲಿಸೋಣ ಎಂದು ಹೇಳಿದ್ದಾರೆ.