ಭೀಮಾ ಕೋರೆಗಾವ್ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ನೆಪವೊಡ್ಡಿ ಮಹಾರಾಷ್ಟ್ರ ಪೊಲೀಸರು ಹಿರಿಯ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ಬಂಧನ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ದೇಶದ ವಿವಿಧ ಭಾಗಳಲ್ಲಿ 28 ಆಗಸ್ಟ್ 2018ರಂದು ನಡೆದ ಹಿರಿಯ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲಿನ ದಾಳಿ ಮತ್ತು ಬಂಧನವನ್ನು ಎಸ್ ಯು ಸಿಐ (ಸಿ) ಖಂಡಿಸಿದೆ.
ಕಲಬುರಗಿಯಲ್ಲಿ ಮಾತನಾಡಿರುವ ಎಸ್‍ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ವ್ಹಿ. ದಿವಾಕರ್ , ಭೀಮಾ-ಕೊರೆಗಾವ್ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ನೆಪವೊಡ್ಡಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ. ಮಹಾರಾಷ್ಟ್ರದ ಪೊಲೀಸ್ ಹಾಗೂ ಆಡಳಿತ ವರ್ಗವು ಹಿರಿಯ ಮಾನವ ಹಕ್ಕುಗಳ ಹಾಗು ಸಾಮಾಜಿಕ ಕಾರ್ಯರ್ತರ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿರುವುದು ಪ್ರಜಾತಾಂತ್ರಿಕ ವ್ಯವಸ್ಥೆಗೆ ವಿರುದ್ಧವಾಗಿದೆ.
ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲು, ಹೋರಾಟನಿರತ ಜನರ ಮನದಲ್ಲಿ ಭಯದ ವಾತಾವರಣವನ್ನು ನಿರ್ಮಿಸಲು ಹೊರಟಿರುವ ಬಿಜೆಪಿಯ ಈ ಫ್ಯಾಸಿಸ್ಟಿಕ್ ನಡೆ ಅತ್ಯಂತ ಖಂಡನಾರ್ಹ. ಈ ಕೂಡಲೇ ಯಾವುದೇ ಶರತ್ತುಗಳಿಲ್ಲದೆ ಬಂಧಿಸಿರುವ ಎಲ್ಲಾ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಎಸ್ ಯು ಸಿಐ(ಸಿ) ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.