ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಚೆನ್ನೈನಲ್ಲಿ ಮಳೆ ಸುರಿಯುತ್ತಿದೆ. ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳು ಜಲಾವೃತವಾಗಿದೆ. ರಾಜ್ಯದಾದ್ಯಂತ ಅನೇಕ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.
ತಮಿಳುನಾಡಿನಲ್ಲಿ 800ಕ್ಕೂ ಹೆಚ್ಚು ಜನರನ್ನು ಚೆನ್ನೈನ ಪರಿಹಾರ ಶಿಬಿರಗಳಿಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈನ 16ಕ್ಕೂ ಹೆಚ್ಚು ಏರಿಯಾದ ರಸ್ತೆಗಳು ಜಲಾವೃತವಾಗಿದ್ದು, ಚೆನ್ನೈನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಸ್ಥಳೀಯರಿಗೆ ಸುರಕ್ಷಿತ ಪ್ರದೇಶಗಳಲ್ಲಿರಲು ಎಚ್ಚರಿಕೆ ನೀಡಲಾಗಿದೆ.
ಗುರುವಾರ ರಾತ್ರಿಯವರೆಗೂ ತಮಿಳುನಾಡಿನ ಈ ಭಾಗಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇಂದು ಮತ್ತು ನಾಳೆ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ಇಂದು ಸುಮಾರು 20 ಮಿಮೀ ಮಳೆಯಾಗುವ ನಿರೀಕ್ಷೆಯಿದೆ.
ಇಂದು ಮತ್ತು ನಾಳೆ ಮಳೆಯು ಆಂಧ್ರಪ್ರದೇಶದ ದಕ್ಷಿಣ ಭಾಗ ಮತ್ತು ತಮಿಳುನಾಡು ಕರಾವಳಿಯನ್ನು ತಲುಪಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ತಮಿಳುನಾಡು ಮಾತ್ರವಲ್ಲ, ಪುದುಚೇರಿ ಹಾಗೂ ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲೂ ಮುಂದಿನ 5 ದಿನ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.