ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ಗೆ ಟಿಕೆಟ್ ನೀಡಿ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೇಲ್ಮನೆ ಟಿಕೆಟ್ ಸರ್ಕಸ್ ಫೈಟ್ ಜೋರಾಗಿದ್ದು ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ಗೆ ಟಿಕೆಟ್ ನೀಡಿ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ. ದಾವಣಗೆರೆ ಮೂಲದ ಅಬ್ದಲ್ ಜಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಕೂಡಾ ವಿಧಾನ ಪರಿಷತ್ ಸದಸ್ಯರಾಗಿದ್ದರು.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರವೇ ಕೊನೆಯ ದಿನ. ಹೀಗಾಗಿ ಸದ್ಯ ಕಾಂಗ್ರೆಸ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ. ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಲ್ಲಿ ವರಿಷ್ಠರ ಭೇಟಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ವರಿಷ್ಠರ ಸಮ್ಮುಖದಲ್ಲಿಯೇ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೊನೆಗೆ ಅಂತಿಮ ಪಟ್ಟಿಯ ಸ್ಪಷ್ಟತೆ ಇಲ್ಲದೆ ಬರಿಗೈಲಿ ವಾಪಸ್ಸಾಗಿದ್ದರು. ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬ ಕುರಿತು ಚರ್ಚಿಸಿ ಭಾನುವಾರ ಪಟ್ಟಿ ರವಾನಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚಿಸಿತ್ತು. ಸದ್ಯ ಈಗ ಇಬ್ಬರ ಹೆಸರನ್ನು ಘೋಷಿಸಲಾಗಿದೆ.