ಬೆಳಗಾವಿ : ಕೋವಿಡ್-19 ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕಪಟ್ಟಿದ್ದಾರೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.