ಕೋಲಾರ : ವ್ಯಕ್ತಿ ಮೃತಪಟ್ಟು ಎಷ್ಟೋ ತಿಂಗಳ ನಂತರ ಅವರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಎಂಬ ಸಂದೇಶ, ಪ್ರಮಾಣ ಪತ್ರಗಳು ಬಂದಿರುವ ಸುದ್ದಿಗಳನ್ನು ಓದಿದ್ದೇವೆ.
ಅದರೆ ಬದುಕಿರುವ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ನೀಡಿರುವ ಅಚ್ಚರಿದಾಯಕ ಪ್ರಸಂಗ ಕೋಲಾರದಲ್ಲಿ ನಡೆದಿದೆ. ಹೌದು, ಜೀವಂತವಾಗಿರುವ ರೈತನೊಬ್ಬನಿಗೆ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಕೋಲಾರ ಕಂದಾಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ (40) ಅವರಿಗೆ ಬದುಕಿರುವಾಗಲೇ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ಶಾಕ್ ಆದ ರೈತ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪಡಿತರ ಚೀಟಿಯಲಿ ಹೆಸರು ತೆಗೆದು ಹಾಕಲಾಗಿತ್ತು. ಈ ವೇಳೆ ಸಂಬಂಧಿಕರು ಪರಿಶೀಲನೆ ನಡೆಸಿದಾಗ ಮರಣ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮರಣ ಪ್ರಮಾಣ ಪತ್ರವನ್ನು ಅಂಗನವಾಡಿ ಕಟ್ಟಡ, ಲೋಕೋಪಯೋಗಿ ಇಲಾಖೆ ಕಟ್ಟಡ, ತಹಶಿಲ್ದಾರ್ ಕಚೇರಿ ಸೇರಿದಂತೆ ಹಲವೆಡೆ ಅಂಟಿಸಿ ಪಡಿತರ ಚೀಟಿಯಲ್ಲೂ ಹೆಸರನ್ನೂ ತೆಗೆದು ಹಾಕಲಾಗಿದೆ.
ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ. ಜಮೀನು ಲಪಾಟಿಯಿಸುವ ಉದ್ದೇಶ ಇರಬಹುದು ಎಂದು ರೈತ ಶಿವರಾಜ್ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತಕ್ಕೆ ಹೋದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನ್ಯಾಯಾಲಯದ ಮೋರೆ ಹೋಗಿದ್ದರು.