ಕೊರೊನಾ ವೈರಸ್ ಗೆ ದೇಶದಲ್ಲಿ ಮೊದಲ ಸಾವು ಕಂಡಿರುವ ಕಲಬುರಗಿಯಲ್ಲಿ ಕೋವಿಡ್ – 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಹೊಸದಾಗಿ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
13 ವರ್ಷದ ಬಾಲಕ, 30 ವರ್ಷದ ಮಹಿಳೆ ಸೇರಿದಂತೆ ಮೂವರು ಪುರುಷರಲ್ಲಿ ಡೆಡ್ಲಿ ಕೊರೊನಾ ಕಾಣಿಸಿಕೊಂಡಿದೆ.
ರೋಗಿ ಸಂಖ್ಯೆ 175 ರ ಸಂಪರ್ಕಕ್ಕೆ ಬಂದ 17 ವರ್ಷದ ಪುರುಷ, ರೋಗಿ ಸಂಖ್ಯೆ 205 ರ ಸಂಪರ್ಕಕ್ಕೆ ಬಂದಿರುವ 13 ವರ್ಷದ ಬಾಲಕ, ರೋಗಿ ಸಂಖ್ಯೆ 205 ರ ಸಂಪರ್ಕಕ್ಕೆ ಬಂದ 30 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ 177 ರ ಸಂಪರ್ಕಕ್ಕೆ ಬಂದಿರುವ 50 ವರ್ಷದ ವ್ಯಕ್ತಿ ಅಲ್ಲದೇ ರೋಗಿ ಸಂಖ್ಯೆ 205 ರ ಸಂಪರ್ಕಕ್ಕೆ ಬಂದಿರುವ 19 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ ಮೂವರು ಸಾವನ್ನಪ್ಪಿದ್ದರೆ, ಪಾಸಿಟಿವ್ ಕೇಸ್ ಗಳ ಸಂಖ್ಯೆ 27ಕ್ಕೆ ಏರಿಕೆಯಾದಂತಾಗಿದೆ.
ಪ್ರಾಥಮಿಕ 365, ದ್ವಿತೀಯ ಹಂತದ ಸಂಪರ್ಕದಲ್ಲಿ ಬಂದಿರುವ 1435 ಜನರನ್ನು ಗುರುತಿಸಲಾಗಿದೆ. 1047 ಜನರು ಹೋಂ ಕ್ವಾರಂಟೈನ್ ನಲ್ಲಿದ್ದರೆ, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 928 ಜನರು 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಇನ್ನು 14 ಕಂಟೈನ್ ಮೆಂಟ್ ಝೋನ್ ಗಳನ್ನು ಗುರುತಿಸಿದ್ದು, 34,690 ಮನೆಗಳನ್ನು ಸರ್ವೇ ಮಾಡಲಾಗಿದೆ. 246 ಜನರು ಐಸೋಲೇಟೆಡ್ ನಲ್ಲಿದ್ದಾರೆ.