ಶಾದಿ ಮಹಲ್ ಹಾಗೂ ಜಿಲ್ಲೆಯಲ್ಲಿರುವ ಸಮುದಾಯ ಭವನಗಳು ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ಸರ್ಕಾರದಿಂದ ದರ ನಿಗದಿಪಡಿಸಬೇಕಾಗಿದೆ. 10 ದಿನದೊಳಗಾಗಿ ದರ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಮುದಾಯ ಭವನಗಳ ಬಾಡಿಗೆ ನಿಗದಿ ಹಾಗೂ ಚರ್ಚ ನವೀಕರಣ ದುರಸ್ತಿಗಳ ಕುರಿತು ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಆರ್. ವೆಂಕಟೇಶಕುಮಾರ, ಸರ್ಕಾರದ ಧನ ಸಹಾಯದೊಂದಿಗೆ ಸಂಘ ಸಂಸ್ಥೆಗಳು ಸಮುದಾಯ ಭವನಗಳನ್ನು ನಿರ್ಮಿಸಿವೆ.
ಸರ್ಕಾರ ನಿಗದಿಪಡಿಸುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಸಾರ್ವಜನಿಕರಿಂದ ಪಡೆಯಬಾರದು ಎಂದು ತಿಳಿಸಿದರು.
ಸಮುದಾಯ ಭವನಗಳ ದರನಿಗದಿಪಡಿಸಲು ಲೋಕೋಪಯೋಗಿ ಇಲಾಖೆಯವರು ಸಮುದಾಯ ಭವನ ನಿರ್ಮಾಣಗೊಂಡ ವರ್ಷ, ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರ, ಸಮುದಾಯ ಭವನದ ವಿಸ್ತೀರ್ಣದ ಮಾಹಿತಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ನೀಡಬೇಕು. ಇದರ ಆಧಾರದ ಮೇಲೆ ಸಮುದಾಯ ಭವನಗಳ ಬಳಕೆ ದರ ನಿಗದಿಪಡಿಸಲಾಗುವುದು.
ಸಮುದಾಯ ಭವನ ನಿರ್ವಹಿಸುವ ಸಂಘ ಸಂಸ್ಥೆಗಳು ಸಮುದಾಯ ಭವನದಲ್ಲಿ ಅಡುಗೆ ಪಾತ್ರೆ, ಪೀಠೋಪಕರಣ ಇಟ್ಟುಕೊಂಡಿದ್ದಲ್ಲಿ ಅವುಗಳಿಗೂ ಸಹ ಬಳಕೆ ದರ ನಿಗದಿಪಡಿಸಲಾಗುವುದು. ಸಂಘ ಸಂಸ್ಥೆಯವರು ಸಾರ್ವಜನಿಕರು ಸಮುದಾಯ ಭವನವನ್ನು ಬಳಕೆಗೆ ಮನವಿ ಸಲ್ಲಿಸಿದಾಗ ಅವರಿಗೆ ಹೆಚ್ಚುವರಿ ಸೌಲಭ್ಯ ಕಡ್ಡಾಯವಾಗಿ ಪಡೆಯಬೇಕು ಎಂದು ಒತ್ತಾಯಿಸಬಾರದು ಎಂದರು.