ಬೆಂಗಳೂರು: ನಟ ದರ್ಶನ್ ಬಂಧಿಸಿ ಮನೆ ಮಾತಾಗಿದ್ದ ಎಸಿಪಿ ಚಂದನ್ ಮತ್ತು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ನಡುವೆ ಗಣೇಶ ಮೆರವಣಿಗೆ ವೇಳೆ ಡಿಜೆ ಬಳಕೆ ಬಗ್ಗೆ ಕಿರಿಕ್ ಆಗಿದೆ.
ಈ ಬಾರಿ ಗಣೇಶ ಮೆರವಣಿಗೆ ವೇಳೆ ಡಿಜೆ ಬಳಸಬಾರದು ಎಂದು ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಆದರೆ ಭಾನುವಾರ ಸಂಜೆ ವಿಜಯನಗರ ಆರ್ ಪಿಸಿ ಲೇಔಟ್ ನಲ್ಲಿರುವ ಗಣೇಶ ವಿಸರ್ಜನೆ ಕಾರ್ಯಕ್ರಮವಿತ್ತು. ಈ ವೇಳೆ ನಿಯಮ ಮೀರಿ ಡಿಜೆ ಹಾಕಲಾಗಿತ್ತು.
ಈ ವೇಳೆ ಸ್ಥಳದಲ್ಲಿದ್ದ ಎಸಿಪಿ ಚಂದನ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಪ್ರಮೋದ್ ಮುತಾಲಿಕ್ ಜೊತೆ ವಾಗ್ವಾದ ನಡೆದಿದೆ. ಡಿಜೆಗೆ ಅವಕಾಶ ಕೊಡಬಾರದು ಎಂದು ಕಮಿಷನರ್ ಆದೇಶವಿದೆ ಎಂದು ಚಂದನ್ ಖಡಕ್ ಆಗಿ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಪ್ರಮೋದ್ ಮುತಾಲಿಕ್ ಮುಸ್ಲಿಮರು ಆಜಾನ್ ಕೂಗಲು ಅವಕಾಶ ಕೊಡ್ತೀರಿ, ಡಿಜೆಗೆ ಯಾಕಿಲ್ಲ ಎಂದು ಕೇಳಿದ್ದಾರೆ.
ಇದರ ಬಗ್ಗೆ ತಕರಾರುಗಳಿದ್ದರೆ ಲಿಖಿತ ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಚಂದನ್ ಹೇಳಿದ್ದಾರೆ. ಕೊನೆಗೆ ಪೊಲೀಸರು ಡಿಜೆ ಸೆಟ್ ವಶಪಡಿಸಿಕೊಂಡರು. ಪ್ರಮೋದ್ ಮುತಾಲಿಕ್ ಮನವೊಲಿಸಿ ಡಿಜೆ ಇಲ್ಲದೇ ಮೆರವಣಿಗೆ ಮಾಡಲು ಅವಕಾಶ ನೀಡಲಾಯಿತು.