ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಬೆಳೆಹಾನಿ ಸಮೀಕ್ಷೆಗೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳಿಬ್ಬರು ಸಸ್ಪೆಂಡ್ ಆಗಿದ್ದಾರೆ.
ಕಲಘಟಗಿ ತಾಲೂಕಿನ ಒಬ್ಬರು ಹಾಗೂ ಕುಂದಗೋಳ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಒಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಕಲಘಟಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಯೋಗೇಂದ್ರಕುಮಾರ ಹಾಗೂ ಕುಂದಗೋಳ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶಿವುಕುಮಾರ ಲಮಾಣಿ ಅಮಾನತುಗೊಂಡಿರುವ ಗ್ರಾಮ ಲೆಕ್ಕಾಧಿಕಾರಿಗಳು.
ಇವರು ತಾಲೂಕಿನ ಇತರೇ ಗ್ರಾಮಲೆಕ್ಕಾಧಿಕಾರಿಗಳನ್ನು ಒಂದುಗೂಡಿಸಿ, ಸರ್ಕಾರದ ಮಹತ್ವದ ಯೋಜನೆಯಾದ ಬೆಳೆಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವನ್ನು ಮಾಡಬಾರದೆಂದು ತಮ್ಮ ಸಹೋದ್ಯೋಗಿಗಳಿಗೆ ಪ್ರಚೋದನೆ ನೀಡಿದ್ದರು. ಅವರ ದಾರಿ ತಪ್ಪಿಸುವ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.