ಬಿ.ಪಿ.ಎಲ್ ಕಾರ್ಡ್ ಗಳನ್ನು ಅಕ್ರಮವಾಗಿ ಹೊಂದಿದವರ ವಿರುದ್ಧ ಜಿಲ್ಲಾಧಿಕಾರಿ ಖಡಕ್ ಕ್ರಮಕ್ಕೆ ಮುಂದಾಗಿದ್ದು, ಕ್ರಿಮಿನಲ್ ಕೇಸ್ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್‍ನ್ನು ಪಡೆದಿದ್ದು, ಸರ್ಕಾರವು ಗಂಭೀರ ಕ್ರಮ ಕೈಗೊಳ್ಳುವ ಮುನ್ನ ಸ್ವಯಂ ಪ್ರೇರಣೆಯಿಂದ ತಮ್ಮ ಹತ್ತಿರದ ಆಹಾರ ಇಲಾಖೆಗೆ ಏಪ್ರಿಲ್ ಅಂತ್ಯದವರೆಗೆ ಹಿಂದಿರುಗಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಖಡಕ್ ಸೂಚನೆ ನೀಡಿದ್ದಾರೆ.
ಅನರ್ಹರು ನಿಗದಿತ ಅವಧಿಯೊಳಗಾಗಿ ಆಯಾ ತಾಲೂಕುಗಳ ತಹಶೀಲ್ದಾರರ ಕಚೇರಿಯಲ್ಲಿನ ಆಹಾರ ಶಿರಸ್ತೇದಾರ, ಆಹಾರ ನಿರೀಕ್ಷಕರನ್ನು ಹಾಗೂ ಕಲಬುರಗಿ ಸಹಾಯಕ ನಿರ್ದೇಶಕರ (ಪಡಿತರ) ಕಚೇರಿಯ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಾವು ಹೊಂದಿರುವ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಎ.ಪಿ.ಎಲ್. ಪಡಿತರ ಚೀಟಿಯನ್ನಾಗಿ ವರ್ಗಾವಣೆ ಮಾಡಿಕೊಳ್ಳಲು ಅಥವಾ ರದ್ದುಪಡಿಸಲು ಅವಕಾಶ ಕಲ್ಪಿಸಲಾಗಿದೆ. ತಾವೇ ಹೀಗೆ ಖುದ್ದಾಗಿ ಬಂದು ಬಿ.ಪಿ.ಎಲ್. ಪಡಿತರ ಚೀಟಿಯನ್ನು ಹಿಂತಿರುಗಿಸಿದರೆ ತಮ್ಮ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ.
ನಿಗದಿತ ಅವಧಿಯಲ್ಲಿ ಪಡಿತರ ಚೀಟಿ ಹಿಂದಿರುಗಿಸದೆ ಹೋದಲ್ಲಿ ದಂಡ ವಸೂಲಿ ಮಾಡುವುದರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.