ನಕಲಿ ದಾಖಲೆ ಸೃಷ್ಠಿಸಿ ಸೇನೆಗೆ ಸೇರಲು ಮುಂದಾಗಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ನಗರದ ನಿವಾಸಿಗಳೆಂದು ನಕಲಿ ದಾಖಲೆ ಸಲ್ಲಿಸಿ ಸೇನೆಗೆ ಸೇರಲು ಯತ್ನಿಸಿದ್ದ ಐವರ ಪೈಕಿ ಇಬ್ಬರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಮಡಿಕೇರಿಯಲ್ಲಿ ನಡೆಯುತ್ತಿದ್ದ ಸೇನಾ ಯೋಧರ ಆಯ್ಕೆ ಸಮಯದಲ್ಲಿ ನಕಲಿ ದಾಖಲೆ ಸಲ್ಲಿಸಿದ್ದ ಐವರ ಪೈಕಿ ಮಹಾರಾಷ್ಟ್ರ ಮೂಲದ ಸಚಿನ್ ಧನಜಿ ಹಾಗೂ ಸಂತೋಷ್ ಶಹಜಿ ಖಂಡೇಕರ್ ಎಂಬುವರು ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಇನ್ನುಳಿದ ಬಾಮ್ನೆ ರಜನಿಕಾಂತ್ ರಾಜಕುಮಾರ್, ಗಡದೆ ಪ್ರಕಾಶ್ ಶಿವಾಜಿ ಹಾಗೂ ಗಲಂಡೆ ತುಕಾರಾಂ ವಿಠಲ್ ತಲೆ ಮರೆಸಿಕೊಂಡಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಿದಾಗ ಪ್ರಕಾಶ್ ಬಾಬಾಸುದೇವ್ ಕಾಟಿ ನೇತೃತ್ವದ ಐವರ ತಂಡ ನಕಲಿ ದಾಖಲೆ ಸೃಷ್ಟಿಸುವ ಜಾಲದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಕಾಶ್ ಬಾಬಾಸುದೇವ್ ಕಾಟಿ, ಸಂತೋಷ್, ಅಕ್ಷಯ ಪಾಟೀಲ್, ಸಾವಂತ್ ಮತ್ತು ಗೋವಿಂದ್ ಸಾಂಬಾಜಿ ನಿಂಬಾಳ್ಕರ್ ತಂಡ ಎಲ್ಲೆಲ್ಲಿ ಸೇನಾ ನೇಮಕಾತಿ ರ್ಯಾಲಿಗಳು ನಡೆಯುತ್ತವೆಯೋ, ಅಲ್ಲಿಗೆ ತೆರಳಿ ಬೇರೆ ರಾಜ್ಯದ ವ್ಯಕ್ತಿಗಳಿಗೆ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್, ಜಾತಿ ಮತ್ತು ಆಧಾಯ ಧೃಡಿಕರಣದ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿದ್ದರು ಎನ್ನಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಂದ ಮೂರು ಲಕ್ಷ ರೂಪಾಯಿ ವರೆಗೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.