ಬಸ್ ನಲ್ಲಿ ಬಂದು ಧಾರವಾಡದಲ್ಲಿ ಇಳಿದುಕೊಂಡಿರುವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರೋದು ದೃಢವಾಗಿರೋ ಬೆನ್ನಲ್ಲೇ ಗದಗ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಪಣಜಿಯಿಂದ 12.03.2020 ರ ರಾತ್ರಿ 8-45 ಕ್ಕೆ ಹೊರಟ ಪಣಜಿ-ಗದಗ ಬಸ್ ಸಂಖ್ಯೆ ಕೆಎ- 26-F-962 ಇದರಲ್ಲಿ 30 ಪ್ರಯಾಣಿಕರು ಇದ್ದರು. ಇದರಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದ ವ್ಯಕ್ತಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.
ಪಣಜಿ- ಗದಗ- ಬೆಟಗೇರಿ ಬಸ್ ನಲ್ಲಿ ಗದಗ ಜಿಲ್ಲೆಗೆ ಆಗಮಿಸಿದ 25 ಪ್ರಯಾಣಿಕರ ಪತ್ತೆ ಕಾರ್ಯ ನಡೆದಿದೆ. ಗದಗ ತಹಶಿಲ್ದಾರ ಹಾಗೂ ಗದಗ ತಾಲೂಕಾ ಆರೋಗ್ಯಾಧಿಕಾರಿಗಳು ಅಡವಿ ಸೋಮಾಪೂರ ತಾಂಡಾದಲ್ಲಿನ 11ರ ಪೈಕಿ 9, ಪಾಪನಾಶಿಯ ಇಬ್ಬರು ಹಾಗೂ ಮಗುವನ್ನು ಪತ್ತೆ ಹಚ್ಚಿ ಅವರ ಆರೋಗ್ಯ ವನ್ನು ಪರೀಕ್ಷಿಸಿ ಮನೆಯಲ್ಲಿಯೇ ನಿಗದಿತ ಅವಧಿಯವರೆಗೆ ಪ್ರತ್ಯೇಕವಾಗಿ ಯಾರದೇ ಸಂಪರ್ಕಕ್ಕೆ ಬರದಂತೆ ಇರಲು ತಿಳಿಸಿ ನಿಗಾವಹಿಸಲಾಗಿದೆ.
ಮುಂಡರಗಿ ತಹಶಿಲ್ದಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ಸಿಂಗಟರಾಯನಕೇರಿ ತಾಂಡಾದ 7 ಜನ ಪ್ರಾಯಾಣಿಕರ ಕುರಿತು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ 6 ಜನರು ವಾಪಸ್ಸು ಗೋವಾಕ್ಕೆ ತೆರಳಿದ್ದು, ಉಳಿದ ಒಬ್ಬರ ಆರೋಗ್ಯ ಪರೀಕ್ಷೆ ನಡೆಸಿ ಮನೆಯಲ್ಲಿ ಪ್ರತ್ಯೇಕವಾಗಿ ನಿಯಮಿತ ಅವಧಿಯವರೆಗೆ ಯಾರ ಸಂಪರ್ಕಕ್ಕೂ ಬರದಂತೆ ಇರಲು ತಿಳಿಸಿ ನಿಗಾವಹಿಸಲಾಗಿದೆ. ಉಳಿದ ಪ್ರಾಯಾಣಿಕರ ಪತ್ತೆಗೆ ಕ್ರಮ ಜಾರಿಯಲ್ಲಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.