ಬೆಂಗಳೂರು : ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಂಡ ವಿಚಾರವಾಗಿ ಬಿಜೆಪಿ ರಾಜಭವನದ ಕದ ತಟ್ಟಿದೆ.
ಈ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕೈ ನಾಯಕರು ಒಬ್ಬೊಬ್ಬರು ಒಂದೊಂದು ಸ್ಪಷ್ಟನೆ ಕೊಡುತ್ತಿದ್ದಾರೆ. ವಿಪಕ್ಷಗಳು ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿಯೂ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಗಂಭೀರ ವಿವಾದವೊಂದನ್ನು ಈ ಮೂಲಕ ಮೈಮೇಲೆ ಎಳೆದುಕೊಂಡಿದೆ. ಮಂಗಳವಾರ ಸುರ್ಜೇವಾಲಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವಿಚಾರ ಬಿಜೆಪಿ, ಜೆಡಿಎಸ್ಗೆ ಈಗ ಭರ್ಜರಿ ಆಹಾರವಾಗಿದೆ.
ಸರ್ಕಾರದ ಸಭೆಯಲ್ಲಿ ಸುರ್ಜೇವಾಲ ಭಾಗವಹಿಸಿರುವುದೇಕೆ? ಇದು ಹೈಕಮಾಂಡ್ ಹಂಗಿನ ಸರ್ಕಾರವೇ ಎಂದು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕಾಗಲಿ, ಬಿಬಿಎಂಪಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಸುರ್ಜೇವಾಲ ಅವರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಂದಿಗೆ ಏನು ಕೆಲಸ ಎಂದು ವಿಪಕ್ಷಗಳು ಹರಿಹಾಯ್ದಿವೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಭೆಗೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.