ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮಳೆ ಇದೀಗ ಚುರುಕುಗೊಂಡಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತವರಣವಿತ್ತು. ನಂತರ ಜೋರು ಮಳೆ ಆರಂಭವಾಗಿತ್ತು. ಅದೇ ರೀತಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚನ್ನಪಟ್ಟಣದ ಸೇರಿದಂತೆ ಮತ್ತಿತರ ಕಡೆ ಮಳೆಯಾಯಿತು.ಬೆಳಗ್ಗೆ 9:30ರ ನಂತರ ಮಳೆ ತುಸು ಜೋರಾಗಿ ಅಬ್ಬರಿಸಿದ್ದು, ಬಸವನಗುಡಿ, ಕಾರ್ಪೊರೇಷನ್, ಕೆ.ಆರ್ ಮಾರುಕಟ್ಟೆ, ಜಯನಗರ, ರಾಜಾಜಿನಗರ, ಹೆಬ್ಬಾಳ, ಮೆಜೆಸ್ಟಿಕ್, ಸದಾಶಿವನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ವಿಧಾನಸೌಧ ಸುತ್ತಮುತ್ತ ವರುಣನ ಸಿಂಚನವಾಯಿತು. ಮಳೆಯಿಂದಾಗಿ ನಗರದ ಅನೇಕ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಕೂಡ ಉಂಟಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಉಂಟಾಗಿತ್ತು. ಬಿಸಿಲ ಬೇಗೆಯಿಂದ ದಣಿದಿದ್ದ ಜನರಿಗೆ ಇಂದು ವರುಣರಾಯ ತಂಪನ್ನೆರೆದಿದ್ದಾನೆ