ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಚೇರಿಯ ವೇದಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿ ಸುದ್ದಿಯಾದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಅಮಾನತು ಮಾಡಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಸಲೀಂ ಅವರು ಆಧಾರರಹಿತ ಆರೋಪ ಮಾಡಿದ್ದಾರೆ, ಅವರು ಹೇಳಿರುವುದರಲ್ಲಿ ಸತ್ಯಾಂಶವಿಲ್ಲ. ವೇದಿಕೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿರುವ ಮಾತುಗಳು ಅಲ್ಲ, ಆಫ್ ದಿ ರೆಕಾರ್ಡ್ ಅವರಿಬ್ಬರೂ ವೈಯಕ್ತಿಕವಾಗಿ ಮಾತನಾಡಿಕೊಂಡಿದ್ದಾರಷ್ಟೆ, ಆದರೂ ಅವರ ಮಾತುಗಳನ್ನು ಪಕ್ಷದ ಶಿಸ್ತು ಸಮಿತಿಗೆ ಕಳುಹಿಸಲಾಗಿದ್ದು ಪರಾಮರ್ಶೆ ನಡೆಸಿ ಸಲೀಂ ಅವರನ್ನು ಅಮಾನತು ಮಾಡಲು ತೀರ್ಮಾನ ಮಾಡಲಾಗಿದೆ. ಉಗ್ರಪ್ಪನವರಲ್ಲಿ ವಿವರಣೆ ಕೇಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಟ್ವೀಟ್ ಮೂಲಕ ಬಿಜೆಪಿಯವರಿಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಅನಧಿಕೃತ ಮಾತುಗಳನ್ನು ಇಟ್ಟುಕೊಂಡು ರೊಟ್ಟಿ ನೆಕ್ಕುತ್ತಿರುವ ಬಿಜೆಪಿಯವರೇ ನಿಮ್ಮ ಪಕ್ಷದವರಾದ ಹೆಚ್ ವಿಶ್ವನಾಥ್ ಅವರು ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಬಿ ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಡಿದ್ದ ಭ್ರಷ್ಟಾಚಾರ ಆರೋಪಗಳಿಗೆ ಮೊದಲು ಉತ್ತರಿಸಿ ಎಂದು ತಿರುಗೇಟು ಕೊಟ್ಟಿದೆ