ಜಿಲ್ಲೆಯಲ್ಲಿ 12 ಸ್ಥಾನ ಗೆಲ್ಲಿಸುವುದಾಗಿ ಹೇಳಿಕೊಂಡಿದ್ದ ಜಾರಕಿಹೊಳಿ ಸಹೋದರರಿಗೆ ಒಬ್ಬನೇ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಲಿಲ್ಲ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ವ್ಯಂಗ್ಯವಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಗೆದ್ದ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಸ್ವಶಕ್ತಿ ಮತ್ತು ವರ್ಚಸ್ಸಿನಿಂದ ಗೆದ್ದಿದ್ದಾರೆ. ಜಾರಕಿಹೊಳಿ ಸಹೋದರರು ತಾವೇ ಸ್ವತಃ ಗೆಲ್ಲುವುದೇ ಕಷ್ಟವಾಗಿತ್ತು ಎಂದರು.
ಜಿಲ್ಲೆಯಲ್ಲಿ ಪ್ರತಿಭಾನ್ವಿತ ಮಹಿಳೆಯರಾದ ಲಕ್ಷ್ಮೀ ಹೆಬ್ಬಾಳಕರ- ಡಾ. ಅಂಜಲಿ ನಿಂಬಾಳಕರ ಇಲ್ಲವೇ ಗಣೇಶ ಹುಕ್ಕೇರಿ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು. ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂದರು. ಜಾರಕಿಹೊಳಿ ಸಹೋದರರಿಗೆ ಯಾವುದೇ ಕಾರಣಕ್ಕೂ ರಾಜ್ಯ ಸಂಪುಟದಲ್ಲಿ ಸ್ಥಾನ ಕೊಡಬಾರದು ಎಂದು ಮುನವಳ್ಳಿ ಆಗ್ರಹಿಸಿದರು.
ಸಾಮಾಜಿಕ ಸೇವೆಯ ಬದ್ದತೆ ಜಾರಕಿಹೊಳಿ ಸಹೋದರರಿಗೆ ಇಲ್ಲವೇ ಇಲ್ಲ ಅವರು ಶುದ್ಧ ವ್ಯಾಪಾರಿಗಳು.ಈ ಬಾರಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಗರ್ವದಿಂದ ಮೆರೆಯುತ್ತಿದ್ದ ಘಟಾನುಘಟಿಗಳನ್ನು ಸೋಲಿಸಿ ಮೂಲೆ ಸೇರಿಸಿದ್ದಾರೆ. ಸುಮಾರು 8 ಕಾಂಗ್ರೆಸ್ ಎಂಎಲ್ ಎ ಗಳು ಗೆಲ್ಲದಂತೆ ನೋಡಿಕೊಂಡಿದ್ದು ಇದೇ ಅಸೂಯೆ ಪ್ರವೃತ್ತಿಯ ಜಾರಕಿಹೊಳಿ ಸಹೋದರರು ಎಂದರು. ಹೊರ ಜಿಲ್ಲೆಯ ಪಿಸಿಸಿ ಮೆಂಬರಗಳನ್ನು ಹಿಂಪಡೆಯಬೇಕು. ಮೂಲ ಕಾಂಗ್ರೆಸ್ಸಿಗ ಡಿ. ಕೆ. ಶಿವಕುಮಾರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಮನವಳ್ಳಿ ಒತ್ತಾಯಿಸಿದ್ದಾರೆ.