ಕಲಬುರಗಿ ವಿಮಾನ ನಿಲ್ದಾಣವನ್ನು ಪ್ರಸಕ್ತ ವರ್ಷದ ಅಂತ್ಯದೊಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಿದ್ಧಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಂಪೂರ್ಣವಾಗಿ ಸೆಪ್ಟೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುತ್ತಿಗೆದಾರರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡ ಕಾಮಗಾರಿಗಳನ್ನು ಸೆಪ್ಟೆಂಬರ್ 10ರೊಳಗಾಗಿ ಪೂರ್ಣಗೊಳಿಸಿ ಲೋಕೋಪಯೋಗಿ ಇಲಾಖೆಗೆ ಒಪ್ಪಿಸಬೇಕು. ಈ ಕಟ್ಟಡಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗಾಗಿ ಅವಶ್ಯಕ ಉಪಕರಣ, ಸಾಮಗ್ರಿಗಳನ್ನು ಅಳವಡಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ವಿಮಾನ ನಿಲ್ದಾಣಕ್ಕೆ ವಿದ್ಯುತ್ ಒದಗಿಸುವ ಕಾಮಗಾರಿ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಾದೇಶಿಕ ಆಯುಕ್ತರು, ವಿದ್ಯುತ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ದೊರೆತಾಗ ಮಾತ್ರ ಎಲ್ಲ ಕಾಮಗಾರಿಗಳನ್ನು ಹಾಗೂ ಉಪಕರಣಗಳನ್ನು ಪರೀಕ್ಷಿಸಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸದಾ ಸಂಪರ್ಕದಲ್ಲಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವ ಜೊತೆಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕೆಂದು ಹೇಳಿದರು.