Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಹುಗ್ರಾಮ ಯೋಜನೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ: ಬೊಮ್ಮಾಯಿ ಸೂಚನೆ

ಬಹುಗ್ರಾಮ ಯೋಜನೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ: ಬೊಮ್ಮಾಯಿ ಸೂಚನೆ
ಬೆಂಗಳೂರು , ಬುಧವಾರ, 25 ಆಗಸ್ಟ್ 2021 (07:23 IST)
ಬೆಂಗಳೂರು (ಆಗಸ್ಟ್ 25);  ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಜಲಜೀವನ್ ಮಿಷನ್  ಯೋಜನೆಯ ಅನುಷ್ಠಾನ ಚುರುಕುಗೊಳಿಸುವ ಉದ್ದೇಶದಿಂದ ಈ ಯೋಜನೆಯಡಿ ಕೈಗೆತ್ತಿಕೊಂಡಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ ಮಾಡುವಂತೆ ಅಧಿಕಾರಿಗಳಿಗೆ ಇಂದು ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಜಲಜೀವನ್ ಮಿಷನ್ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ತಿಳಿಸಿದರು.
"ಪ್ರತಿ 15 ದಿನಕ್ಕೊಮ್ಮೆ ಬಹುಗ್ರಾಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಪ್ರತಿ ತಿಂಗಳು ತಾವು ಖುದ್ದು ಪ್ರಗತಿ ಪರಿಶೀಲನೆ ಮಾಡುವುದಾಗಿ" ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮೇಲ್ಮೈ ಜಲ ಮೂಲ ಇಲ್ಲದ ಜಿಲ್ಲೆಗಳಿಗೆ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
2022-23ರ ಸಾಲಿಗೆ ಯೋಜನೆ ರೂಪಿಸಿ, ಅನುಮೋದನೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪ್ರಸಕ್ತ ಸಾಲಿನ ಎಲ್ಲ ಡಿಪಿಆರ್ ಗಳ ಅನುಮೋದನಾ ಪ್ರಕ್ರಿಯೆ ಅಕ್ಟೋಬರ್ ಒಳಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಮೋದನೆ ಯಲ್ಲಿನ ತೊಡಕುಗಳ ನಿವಾರಣೆಗೆ ತಾವೇ ಖುದ್ದು ಕ್ರಮ ವಹಿಸುವ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ