Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೈಸೂರು ರಂಗಾಯಣಕ್ಕೆ ಬಂದು ಮಕ್ಕಳಿಗೆ ‘ಕೈತುತ್ತು’ ನೀಡಿದ್ದರು ಅನಾಥ ಮಕ್ಕಳ ತಾಯಿ

ಮೈಸೂರು ರಂಗಾಯಣಕ್ಕೆ ಬಂದು ಮಕ್ಕಳಿಗೆ ‘ಕೈತುತ್ತು’ ನೀಡಿದ್ದರು ಅನಾಥ ಮಕ್ಕಳ ತಾಯಿ
mysore , ಬುಧವಾರ, 5 ಜನವರಿ 2022 (20:43 IST)
“ನಾನು ನನ್ನ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೆ. ಒಮ್ಮೆ ಬಸ್‌ನಲ್ಲಿ ಹೋಗುತ್ತಿದ್ದಾಗ ಟಿಕೆಟ್ ಪರೀಕ್ಷಕರು ಬಂದು ಟಿಕೆಟ್ ಇಲ್ಲದ ನನ್ನನ್ನು ಬಸ್‌‌ನಿಂದ ಹೊರದೂಡಿದರು. ನಾನು ಗಾಯಗೊಂಡೆ. ಬಸ್‌‌ ಸ್ಪಲ್ಪ ದೂರ ಸಾಗಿತ್ತಷ್ಟೇ. ಸಿಡಿಲು ಬಡಿದು ಸಂಪೂರ್ಣ ಹೊತ್ತಿ ಉರಿಯಿತು. ನನ್ನ ಕಣ್ಣುಗಳ ಮುಂದೆಯೇ ನಡೆದ ಭಯಾನಕ ದೃಶ್ಯವಿದು. ನಾನು ಮತ್ತೆ ಹೇಗೆ ಉಳಿದೆ ಎಂದು ಯೋಚಿಸಿದೆ. ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಬದುಕಿಸಲು ಇಚ್ಛಿಸಿರಬೇಕು ಎಂದು ಭಾವಿಸಿದೆ…”
…ಹೀಗೆ ತಮ್ಮ ಬದುಕಿನ ಅನುಭವಗಳನ್ನು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಂಚಿಕೊಂಡಿದ್ದರು ಮಹಾರಾಷ್ಟ್ರದ ಅನಾಥಮಕ್ಕಳ ಮಹಾತಾಯಿ ಸಿಂಧೂತಾಯಿ ಸಪ್ಕಾಲ್‌. ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಿದ್ದ ಭಾಗೀರಥಿಬಾಯಿ ಕದಂ ಅವರು ತಮ್ಮ ಅಧಿಕಾರವಧಿಯಲ್ಲಿ (2018) ನಡೆದ ಚಿಣ್ಣರ ನಾಟಕೋತ್ಸವಕ್ಕೆ ಸಿಂಧೂತಾಯಿಯವರನ್ನು ಕರೆಸಿದ್ದರು.
ಮೈಸೂರು ರಂಗಾಯಣ ಸಿಂಧೂತಾಯಿ ಅವರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದ ಸಿಂಧೂತಾಯಿ, ಅನಾಥ ಮಕ್ಕಳಿಗೆ ತಾವು ಆಶ್ರಯ ನೀಡಿದ್ದನ್ನು ಹಂಚಿಕೊಂಡಿದ್ದರು. “ಕೆಲವು ಕೌಟುಂಬಿಕ ಸಮಸ್ಯೆಗಳಿಂದ ನಾನು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೆ. ನೀರು ಕೇಳುತ್ತಾ ಸಾಯುತ್ತಿರುವ ವ್ಯಕ್ತಿಯನ್ನು ನಾನು ನೋಡಿದೆ. ನಾನು ಅವನಿಗೆ ನೀರು ಕೊಟ್ಟೆ. ಆತ ಹೇಳಿದ- ‘ನೀವು ನೀಡಿದ ನೀರಿನಿಂದ ನನ್ನ ಜೀವ ಉಳಿಯಿತು’ ಎಂದು. ಒಬ್ಬ ವ್ಯಕ್ತಿಗೆ ನೀರು ಕೊಡುವುದರಿಂದ ನಾನು ಒಂದು ಜೀವವನ್ನು ಉಳಿಸಬಹುದೇ ಎಂದು ನಾನು ನಿರ್ಧರಿಸಿದೆ. ನಂತರ ನಾನು ಇನ್ನೂ ಕೆಲವು ಜೀವಗಳನ್ನು ಉಳಿಸಲು ಬದುಕಬೇಕು ಎಂದು ನಿರ್ಧರಿಸಿದೆ” ಎಂದು ಅವರು ಹೇಳಿದ್ದನ್ನು ಭಾಗೀರಥಿಬಾಯಿ ಕದಂ ನೆನೆಯುತ್ತಾರೆ.
ಮೈಸೂರಿನ ರಂಗಾಯಣಕ್ಕೆ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್‌ ಭೇಟಿ ನೀಡಿದ್ದ ಸಂದರ್ಭ. ರಂಗಾಯಣದ ಅಂದಿನ ನಿರ್ದೇಶಕಿ ಭಾಗೀರಥಿಬಾಯಿ ಕದಂ ಚಿತ್ರದಲ್ಲಿದ್ದಾರೆ.
“ಅವರು ಒಬ್ಬರ ಮಕ್ಕಳ ತಾಯಿಯಾಗಿರಲ್ಲ. ಸಾವಿರಾರು ಅನಾಥ ಮಕ್ಕಳ ತಾಯಿಯಾಗಿದ್ದರು. ಅಂತಹ ತಾಯಿಯನ್ನು ಚಿಣ್ಣರ ಮೇಳದ ನಾಟಕೋತ್ಸವಕ್ಕೆ ಕರೆಸಿದ್ದು ಒಂದು ಅವಿಸ್ಮರಣೀಯ ಕ್ಷಣ. ಅವರ ಸಾವಿನ ಸುದ್ದಿ ಕೇಳಿದ ಬಳಿಕ ಸಾವಿರಾರು ಮಕ್ಕಳು ಅನಾಥರಾದರೇನೋ ಅನಿಸುತ್ತಿದೆ. ಸಿಂಧೂ ತಾಯಿಯವರ ಮಾತುಗಳನ್ನು ಕೇಳಿದವರು ಸ್ಫೂರ್ತಿಯಿಂದ ಪುಟಿದೇಳುತ್ತಿದ್ದರು. ಚಿಣ್ಣರೊಂದಿಗೆ ಅಮ್ಮಂದಿರ ಕೈತುತ್ತು ಕಾರ್ಯಕ್ರಮವನ್ನು ರಂಗಾಯಣ ಆಯೋಜಿಸಿತ್ತು. ನೂರಾರು ಮಕ್ಕಳು ಸಿಂಧೂತಾಯಿಯವರ ಕೈತುತ್ತು ಸೇವಿಸಿದರು” ಎಂದು ಅವರು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಂಧೂತಾಯಿ, ”ನನ್ನನ್ನು ದೇವರು ಎನ್ನುತ್ತಾರೆ. ನಾನು ದೇವರಲ್ಲ, ನಾನು ತಾಯಿ. ಸಂಸಾರ ಎನ್ನುವುದು ಸೈಕಲ್‌ನ ಹಾಗೇ ಸೈಕಲ್‌ನ ಮುಂದಿನ ಚಕ್ರ ತಂದೆಯಾದರೆ, ಹಿಂದಿನ ಚಕ್ರ ತಾಯಿ. ಸೈಕಲ್‌ನಲ್ಲಿ ಹಿಂದಿನ ಚಕ್ರಕ್ಕೆ ಹೇಗೆ ಭಾರ ಜಾಸ್ತಿಯೋ ಹಾಗೇ ತಾಯಿಗೂ ಕೂಡ ಸಂಸಾರದ ಭಾರ ಜಾಸ್ತಿಯಾಗಿರುತ್ತದೆ. ತಂದೆ, ತಾಯಿ ತಮ್ಮ ಬಟ್ಟೆ ಹರಿದಿದ್ದರೂ, ಮಕ್ಕಳಿಗೆ ಉತ್ತಮ ಬಟ್ಟೆಯನ್ನು ಕೊಡಿಸುತ್ತಾರೆ. ಹಾಗೆಯೇ ಮಕ್ಕಳು ವೃದ್ಧಾಪ್ಯದಲ್ಲಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಆಶಿಸಿದ್ದರು.
“ನಾನು ಅನಾಥಳಾಗಿ ಬಂದೆ. ನನ್ನನ್ನು ಅನಾಥ ಮಕ್ಕಳು ತಾಯಿಯಾಗಿಸಿದರು. ಇಂದು ಅವರು ಅನಾಥರಲ್ಲ, ನಾನು ಅನಾಥಳಲ್ಲ. ನನ್ನೊಟ್ಟಿಗೆ ಅವರು, ಅವರೊಂದಿಗೆ ನಾನು ಇದ್ದೇನೆ. ಹಸಿವಿನ ನೋವು ಅನುಭವಿಸಿದ ನಾನು ಅದನ್ನು ದೂರಾಗಿಸಲು ಹಾಡು ಹಾಡಿ, ಭಿಕ್ಷೆ ಬೇಡಿ ಹಸಿವು ನೀಗಿಸುತ್ತಿದ್ದೆ. ಕುಟುಂಬದಿಂದ ದೂರ, ಅನಾಥೆ, ಹಸಿವು ಈ ಎಲ್ಲ ನೋವುಗಳಿಂದ ದೂರಾಗಬೇಕು ಎಂದು ಸಾಯಲು ನಿರ್ಧರಿಸಿದೆ. ಆ ಸಂದರ್ಭದಲ್ಲಿ ವೃದ್ಧರೊಬ್ಬರು ನೀರು ಕೇಳಿದರು ಅವರಿಗೆ ನೀರು ಕುಡಿಸಿದೆ. ನನ್ನ ಬದುಕಿಸಿದೆ ತಾಯಿ ಎಂದು ನುಡಿದರು. ಆ ಒಂದೇ, ಒಂದು ನುಡಿ ನನ್ನ ಬದುಕನ್ನು ಬದಲಿಸಿತು. ನನ್ನಲ್ಲಿಯೂ ಒಂದು ಶಕ್ತಿಯಿದೆ ಎಂದು ಅರಿತು ಅನಾಥರೆಲ್ಲರನ್ನೂ ನನ್ನ ಮಕ್ಕಳು ಎಂದು ಭಾವಿಸಿ ಅವರಿಗಾಗಿ ಬದುಕಿದೆ” ಎಂದು ಹೇಳಿದ್ದರು ಸಿಂಧೂತಾಯಿ.
ಈ ನೆನಪುಗಳನ್ನು ‘ನಾನುಗೌರಿ.ಕಾಂ’ ಜೊತೆ ಮೆಲುಕು ಹಾಕಿದ ಭಾಗೀರಥಿಬಾಯಿ ಕದಂ ಅವರು, “ಇಡೀ ಮಹಿಳೆಯರಿಗೆ ಸಿಂಧೂತಾಯಿ ಆದರ್ಶ ದೀಪವಾಗಿದ್ದರು. ಯಾವ ಹೆಣ್ಣು ತನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾಳೋ, ಹತಾಶೆಗೆ ಒಳಗಾಗಿದ್ದಾಳೋ ಆಕೆಯೂ ಎದ್ದು ನಿಂತು ಸಮಾಜದಲ್ಲಿ ಒಂದು ಒಳ್ಳೆಯ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಸಿಂಧೂತಾಯಿ ಉದಾಹರಣೆಯಾಗಿ ನಿಂತಿದ್ದಾರೆ. ಕಳೆದ ಐದಾರು ತಿಂಗಳ ಹಿಂದಿನವರೆಗೂ ಹಲವು ಮೆಸೇಜ್‌ಗಳನ್ನು ಅವರು ಕಳುಹಿಸುತ್ತಿದ್ದರು. ಓದು ಬರೆಯಲು ಬಾರದೇ ಇದ್ದ ಅವರು ತಾವಾಗಿಯೇ ವಿದ್ಯಾಭ್ಯಾಸ ಮಾಡಿ, ಎಲ್ಲವನ್ನೂ ಕಲಿತುಕೊಂಡು, ಮಕ್ಕಳಿಗೂ ವಿದ್ಯಾಭ್ಯಾಸ ಕಲಿಸಿ ಸಾಕಿ ಸಲುಹಿಸಿದರು. ಅವರ ಕಾರ್ಯಕ್ಕೆ ಅಸಂಖ್ಯಾತ ದಾನಿಗಳು ಸಹಾಯ ಮಾಡಿದ್ದರು. ಅವರ ಅಗಲಿಕೆಯಿಂದಾಗಿ ಮಹಿಳಾ ಸಮಾಜ ಒಂದು ದಾರಿದೀಪವನ್ನು ಕಳೆದುಕೊಂಡಂತಾಗಿದೆ” ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

15 ರಿಂದ 18 ವರ್ಷದೊಳಗಿನ 3.5ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ