ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಷ್ಠಪುತ್ರ ರಾಕೇಶ್ (39) ಅವರು ಬೆಲ್ಜಿಯಂ ಪ್ರವಾಸದಲ್ಲಿದ್ದು, ಪ್ಯಾಂಕ್ರಿಯಸ್ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಲ್ಜಿಯಂ ದೇಶದ ಬ್ರಸೆಲ್ಸ್ ನಗರದಲ್ಲಿರುವ ಆಂಟಿವರ್ಪ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಬೆಲ್ಜಿಯಂ ಪ್ರವಾಸದಲ್ಲಿದ್ದ ರಾಕೇಶ್ ಅಲ್ಲಿಗೆ ತೆರಳುವ ಮುನ್ನವೆ ಯಕೃತ್ (ಲಿವರ್) ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರವಾಸದ ವೇಳೆ ಅವರ ಆರೋಗ್ಯ ಹದಗೆಟ್ಟಿತ್ತು. ಜತೆಗೆ ಕಡಿಮೆ ರಕ್ತದ ಒತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಬೆಲ್ಜಿಯಂ ಪ್ರವಾಸದಲ್ಲಿರುವ ಪುತ್ರನ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ, ಪುತ್ರನ ಅನಾರೋಗ್ಯ ಕುರಿತು ಮಾಹಿತಿ ಪಡೆದುಕೊಂಡಿದ್ದು, ಕಳೆದ ಎರಡು ದಿನಗಳ ಹಿಂದೆ ಪುತ್ರನ ಆರೋಗ್ಯ ವಿಚಾರಿಸಿಕೊಳ್ಳಲು ಬೆಲ್ಜಿಯಂ ದೇಶಕ್ಕೆ ತೆರಳಿದ್ದರು.
ಸಿಎಂ ಪುತ್ರ ರಾಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಪುತ್ರ ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ಅವರ ಮಗಳು ಬೆಂಗಳೂರಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ರಾಕೇಶ್ ಅವರ ಪತ್ನಿ ಸಹ ಅವರ ಆರೋಗ್ಯ ವಿಚಾರಿಸಿಕೊಳ್ಳಲು ಬೆಲ್ಜಿಯಂಗೆ ತೆರಳಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.