ಉಕ್ಕಿನ ಸೇತುವೆ ವಿಚಾರ ಅತ್ಯಂತ ಸೂಕ್ಷ್ಮ ವಿಚಾರ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ಕಿನ ಸೇತುವೆ ಯೋಜನೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಗಮನಿಸಿದರೆ, ಅವರಲ್ಲಿರುವ ಸೊಕ್ಕನ್ನು ತೋರಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ನಡೆ ದುರಹಂಕಾರದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದ ಉದ್ದೇಶಿತ ಉಕ್ಕಿನ ಸೇತುವೆ ಯೋಜನೆಯಿಂದ ನಗರದ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾತ್ರ ಸಿಗುತ್ತದೆ. ಈ ಯೋಜನೆಗೆ ರಾಜ್ಯ ಸರಕಾರ 1800 ಕೋಟಿ ರೂಪಾಯಿ ದುಂದುವೆಚ್ಚ ಮಾಡುತ್ತಿದೆ. ಸರಕಾರದ ಯೋಜನೆಗಳು ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಮಿತವ್ಯಯದಿಂದ ಕೂಡಿರಬೇಕು ಎಂದರು.
ಬಿಜೆಪಿ ಆಡಳಿತದಲ್ಲಿ ಉಕ್ಕಿನ ಸೇತುವೆ ಯೋಜನೆ ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆರಂಭದಲ್ಲೇ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ