ಮಂಗಳೂರು: ಮಧ್ಯಾಹ್ನ ಮಾಂಸದೂಟ ಮಾಡಿ ಸಂಜೆ ದ.ಕ. ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನಡೆ ಇದೀಗ ವಿವಾದಕ್ಕೀಡಾಗಿದೆ.
ಭಾನುವಾರ ಬಂಟ್ವಾಳದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಾದ ಸಚಿವ ಖಾದರ್, ರಮಾನಾಥ್ ರೈ ಮೊದಲಾದವರ ಜತೆ ಮೀನಿನ ಖಾದ್ಯ ಸೇವಿಸಿದ್ದರು. ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.
ಇದರ ಬಗ್ಗೆ ವಿವಾದ ಹೊತ್ತಿಕೊಂಡಿದೆ. ಮಾಂಸದೂಟ ಸೇವಿಸಿ ಸಿಎಂ ದೇವಾಲಯ ಪ್ರವೇಶಿಸಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಧರ್ಮಸ್ಥಳ ಕ್ಷೇತ್ರದ ಮೂಲಗಳು ಇದಕ್ಕೆ ಪ್ರತಿಕ್ರಿಯಿಸಿದ್ದು, ಮಾಂಸದೂಟ ಸೇವಿಸಿ ದೇವಾಲಯ ಪ್ರವೇಶಿಸಬಾರದು ಎಂದೇನಿಲ್ಲ ಎಂದಿವೆ.
ಅತ್ತ ಸಿಎಂ ಸಿದ್ದರಾಮಯ್ಯ ಕೂಡಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಂಸದೂಟ ಮಾಡಿ ದೇವಾಲಯಕ್ಕೆ ಬಂದರೆ ದೇವರು ಬೇಡ ಎನ್ನುತ್ತಾನೆಯೇ? ಎಂದು ಪ್ರಶ್ನಿಸಿದ್ದಾರೆ. ಏನೇ ಆದರೂ ಈ ವಿಷಯವೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ