ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಆದೇಶಿಸಿದ್ದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಇಂದು ಮತ್ತೆ ಹೈಕೋರ್ಟ್ ನಲ್ಲಿ ನಡೆಯಲಿದೆ.
ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಇಂದು ಮಧ್ಯಾಹ್ನ 2.30 ಕ್ಕೆ ಹೈಕೋರ್ಟ್ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ. ಈಗಾಗಲೇ ಹೈಕೋರ್ಟ್ ಮೂರು ಬಾರಿ ಈ ವಿಚಾರವಾಗಿ ವಿಚಾರಣೆ ನಡೆಸಿ ಇಂದಿಗೆ ಮತ್ತೊಮ್ಮೆ ವಿಚಾರಣೆ ಮುಂದೆ ಹಾಕಿತ್ತು.
ಇಂದಿನ ವಿಚಾರಣೆ ರಂಗೇರುವ ಸಾಧ್ಯತೆಯಿದೆ. ಮೊನ್ನೆ ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಇಂದು ಸಿಎಂ ಪರ ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ. ಅವಕಾಶವಿದ್ದರೆ ಮಾತ್ರ ಅಭಿಷೇಕ್ ಮನು ಸಿಂಘ್ವಿ, ದೂರುದಾರರ ಪರ ಕೆಜಿ ರಾಘವನ್ ವಾದ ಮಂಡಿಸಲಿದ್ದಾರೆ.
ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿರುವ ಕಾಂಗ್ರೆಸ್ ನಿಯೋಗ ಪ್ರಾಸಿಕ್ಯೂಷನ್ ಗೆ ಆದೇಶಿಸಿರುವುದು ತಪ್ಪು ಎಂದು ವಾದ ಮಂಡಿಸಿದೆ. ಇದರ ಮಧ್ಯೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದೇ ತೀರ್ಪು ಕೊಡುತ್ತದಾ ಅಥವಾ ಮತ್ತೆ ವಿಚಾರಣೆ ಮುಂದುವರಿಯಬಹುದಾ ಎಂದು ಕಾದುನೋಡಬೇಕಿದೆ.