ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಎಲ್ಲಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಕಾಲೇಜಿನ ಕ್ಯಾಂಪಸ್‍ನಲ್ಲಿ ಆದ ದುರ್ಘಟನೆ ನಮ್ಮೆಲ್ಲರನ್ನು ಬೆಚ್ಚಿಬೀಳಿಸಿದೆ. ಬೇರೆ ಯಾವುದೋ ರಾಜ್ಯದಲ್ಲಿ ಹೆಣ್ಮಕ್ಕಳನ್ನು ಹತ್ತಾರು ಬಾರಿ ಚುಚ್ಚಿ ಕೊಲ್ಲುವುದನ್ನು ಕೇಳಿದ್ದೆವು. ಆದರೆ ಈಚೆಗೆ ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವುದು ದುರ್ದೈವ ಎಂದರು.
ತನ್ನನ್ನು ಪ್ರೀತಿಸಿಲ್ಲ ಎಂಬ ಕಾರಣಕ್ಕಾಗಿ ಹಿಂದೂ ಹುಡುಗಿ ನೇಹಾಳನ್ನು ಅಲ್ಪಸಂಖ್ಯಾತ ಕೋಮಿನ ಹುಡುಗ ಕಾಲೇಜು ಕ್ಯಾಂಪಸ್ಸಿನೊಳಗೆ 9-10 ಬಾರಿ ಚುಚ್ಚಿ ಕೊಂದಿದ್ದಾನೆ. ಅವಳ ಹೊಟ್ಟೆಭಾಗ ಪೂರ್ತಿ ಹೊರಕ್ಕೆ ಬರುವ ರೀತಿಯಲ್ಲಿ ಭಯಾನಕವಾಗಿ ಕೊಲೆ ಮಾಡಿದ್ದಾನೆ. ನಮ್ಮೆಲ್ಲರಿಗೂ ತುಂಬ ದುಃಖವಾಗಿದೆ ಎಂದು ನುಡಿದರು.
ಹಿಂದೆ ಉಡುಪಿಯಲ್ಲಿ ಶೌಚಾಲಯದಲ್ಲಿ ಹಿಂದೂ ಹೆಣ್ಮಕ್ಕಳ ವಿಡಿಯೋ ಮಾಡಿದ್ದರು. ಹಾವೇರಿಯ ಹಾನಗಲ್‍ನಲ್ಲಿ ಹಿಂದೂ ಯುವಕರನ್ನು ಥಳಿಸಲಾಗಿತ್ತು. ಕಳೆದ 5-6 ತಿಂಗಳಿನಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಭಯ ಮೂಡಿಸುತ್ತಿವೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಧೈರ್ಯ ಅವರಿಗೆ ಬಂತು. ಪೊಲೀಸರು ಆ ಕೇಸನ್ನು ವಿಳಂಬ ಮಾಡದೆ ತನಿಖೆ ಮಾಡುತ್ತಿದ್ದರೆ, ದೇಶದ್ರೋಹದ ಕೇಸಿನಡಿ ತನಿಖೆ ನಡೆಸಿದರೆ ಉಳಿದವರಿಗೆ ಆ ರೀತಿ ಮಾಡಲು ಧೈರ್ಯ ಬರುತ್ತಿರಲಿಲ್ಲ ಎಂದು ತಿಳಿಸಿದರು.
ರಾಮನವಮಿಯ ದಿನ ಕಾರಿನಲ್ಲಿ ಭಗವಾಧ್ವಜ ಹಿಡಿದು ಹೋಗುತ್ತಿದ್ದ 3 ಜನ ಯುವಕರಿಗೆ, ಧ್ವಜ ಬಿಸಾಡಲು ಸೂಚಿಸಿದ್ದಲ್ಲದೆ, ಜೈ ಶ್ರೀರಾಂ ಎಂದು ಕೂಗದಂತೆ, ಹಾಗೂ ಅಲ್ಲಾ ಹೋ ಅಕ್ಬರ್ ಕೂಗುವಂತೆ ಧಮ್ಕಿ ಹಾಕಿದ್ದಾರೆ. ಕೊಡಗಿನ ಸಿದ್ದಾಪುರದಲ್ಲಿ ನಿನ್ನೆ ಮೈಸೂರಿನ ಅಭ್ಯರ್ಥಿ ಮಹಾರಾಜರ ಚುನಾವಣೆ ಪ್ರಚಾರದಲ್ಲಿ ನಮ್ಮ ಯುವಕರು ತೊಡಗಿಸಿಕೊಂಡಿದ್ದರು. ಬಳಿಕ ಪ್ರಚಾರ ಮುಗಿಸಿ ಹೋಗುತ್ತಿದ್ದವರ ಮೇಲೆ ಅಲ್ಪಸಂಖ್ಯಾತ ಕೋಮಿನ ಯುವಕ ಕಾರು ಹಾಯಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವಿವರಿಸಿದರು.
ಮೈಸೂರಿನಲ್ಲಿ ಮೋದಿಜೀ ಬಗ್ಗೆ ಹಾಡು ರಚಿಸಿದ ಯುವಕನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಅವರಿಗೆ ಹೊಡೆದು, ಸಿಗರೇಟಿನಲ್ಲಿ ಸುಟ್ಟು 'ನೀನು ಮೋದಿ ಬಗ್ಗೆ ಯಾವ ಧೈರ್ಯದಲ್ಲಿ ಹಾಡು ಬರೆದೆ? ಅಲ್ಲಾ ಹೋ ಅಕ್ಬರ್ ಎಂದು ಹೇಳು. ಪಾಕಿಸ್ತಾನ ಜಿಂದಾಬಾದ್ ಎನ್ನಬೇಕು' ಎಂದು ಆಗ್ರಹಿಸಿದ್ದಾರೆ. ಯುವಕನ ಮೇಲೆ ಮೂತ್ರ ಹೊಯ್ದು, ಕಿಸೆಯಲ್ಲಿದ್ದ ರಾಮನ ಫೋಟೊದ ಮೇಲೆ ಮೂತ್ರ ಮಾಡಿದ್ದಾರೆ ಎಂದು ತಿಳಿಸಿದರು.
ರಾಮೇಶ್ವರಂ ಕೆಫೆಯಲ್ಲಿ ಈಚೆಗೆ ಬಾಂಬ್ ಇಡಲಾಗಿತ್ತು. ಕಡಬದಲ್ಲಿ ಯುವಕನೊಬ್ಬ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಆಸಿಡ್ ಹಾಕಿದ್ದಾನೆ. 3 ಜನ ಮಕ್ಕಳು ಪರೀಕ್ಷೆ ಬರೆಯಲಾಗದೆ ಆಸ್ಪತ್ರೆಗೆ ಹೋಗಬೇಕಾಯಿತು. ಮಂಡ್ಯದ ಕೆರೆಗೋಡಿನಲ್ಲಿ ಹನುಮಾನ್ ಧ್ವಜವನ್ನು ಇಳಿಸಲೇಬೇಕೆಂದು ಷಡ್ಯಂತ್ರ ಮಾಡಿ ಅದನ್ನು ಇಳಿಸಲಾಗಿತ್ತು ಎಂದು ಆಕ್ಷೇಪಿಸಿದರು.
ಮೊನ್ನೆ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸ ಆಲಿಸುತ್ತಿದ್ದ ಯುವಕನನ್ನು ಅನ್ಯಕೋಮಿನ ಜನರು ಥಳಿಸಿದ್ದಾರೆ. ಏಟು ತಿಂದ ಹುಡುಗನ ಮೇಲೆ ಪೊಲೀಸ್ ಕೇಸ್ ಮಾಡಿದ್ದಾರೆ. ಅಂದರೆ, ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಎಂದು ಕೇಳಿದರು.
ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್‍ನ (ಪಿಎಫ್‍ಐ) ಎಲ್ಲ ಕೇಸನ್ನೂ ವಾಪಸ್ ಪಡೆದಿದ್ದರು. ಸಮಾಜದ್ರೋಹಿಗಳು, ಭಯೋತ್ಪಾದಕರನ್ನು ರಸ್ತೆಗೆ ಬಿಟ್ಟರು ಎಂದು ಆರೋಪಿಸಿದರು. ಹತ್ತಾರು ನಮ್ಮ ಹಿಂದೂ ಯುವಕರ ಹತ್ಯೆ ಆಗಿತ್ತು. ಪ್ರವೀಣ್ ನೆಟ್ಟಾರು ಕೇಸಿನ ನಂತರ ಕೇಂದ್ರ ಸರಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿತು. ಇದರ ಪರಿಣಾಮವಾಗಿ ಪಿಎಫ್‍ಐ ದೇಶದಲ್ಲಿ ನಿಷೇಧಿಸಲ್ಪಟ್ಟಿತು ಎಂದರು.
ನಿಷೇಧಿತ ಪಿಎಫ್‍ಐ ಸಂಘಟನೆಯ ಎಲ್ಲ ಯುವಕರು ಅದರದೇ ಮುಖವಾಣಿ, ರಾಜಕೀಯ ಪಕ್ಷ ಎಸ್‍ಡಿಪಿಐ ಸೇರಿದ್ದಾರೆ. ಎಸ್‍ಡಿಪಿಐ ಇದೀಗ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದೆ. ಯಾರೆಲ್ಲ ಭಯೋತ್ಪಾದಕರಿದ್ದರೋ, ಯಾರನ್ನು ಸಿದ್ದರಾಮಯ್ಯನವರು ಬಿಡುಗಡೆ ಮಾಡಿದ್ದರೋ, ಯಾರು ಹಿಂದೂ ಯುವಕರ ಹತ್ಯೆಗೆ ಕಾರಣರಾಗಿದ್ದರೋ, ಯಾರು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದರೋ ಅವರೆಲ್ಲರೂ ಬಿಡುಗಡೆ ಆಗಿದ್ದು ಮಾತ್ರವಲ್ಲ; ಅವರನ್ನು ರಸ್ತೆಗೆ ಬಿಟ್ಟಿದ್ದು ಮಾತ್ರವಲ್ಲ; ಅವರೇ ಇದೀಗ ಕಾಂಗ್ರೆಸ್ಸಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕಳೆದ ಈದ್ ಮಿಲಾದ್‍ನಲ್ಲಿ ಔರಂಗಜೇಬನ ದೊಡ್ಡ ದೊಡ್ಡ ಕಟೌಟ್ ಮಾಡಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಪ್ರದರ್ಶಿಸಿದ್ದರು. ಪ್ರಶ್ನಿಸಲು ಹೋದವರ ಮೇಲೆ ಹಲ್ಲೆ ಆಗಿತ್ತು. ನೂರಾರು ಹಿಂದೂ ಯುವತಿಯರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಎದೆಭಾಗದ ಮೇಲೆ ಕೈ ಹಾಕಿದ್ದರು. ಕೇಸು ಕೊಟ್ಟರೂ ಅದನ್ನು ಪೊಲೀಸರು ಪಡೆಯಲಿಲ್ಲ. ಶಿವಮೊಗ್ಗದ ಒಂದೊಂದು ಮನೆಯ ಕಥೆ ಕೇಳಿದರೆ ತುಂಬ ದುಃಖವಾಗುತ್ತದೆ. ಹೆಣ್ಮಕ್ಕಳ ಮೇಲಿನ ದೌರ್ಜನ್ಯದ ವಿಚಾರವನ್ನು ಹೇಳಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ವಕ್ತಾರರಾದ ಪ್ರಕಾಶ್, ಅಶೋಕ್ ಗೌಡ ಅವರು ಭಾಗವಹಿಸಿದ್ದರು.<>