ಬೆಂಗಳೂರು: ಶ್ರೀ ನಾರಾಯಣ ಗುರು ಅವರು ಒಬ್ಬ ತತ್ವಜ್ಞಾನಿ, ಆಧ್ಯಾತ್ಮಕಿ ನಾಯಕ ಮತ್ತು ಸಮಾಜ ಸುಧಾರಕರು. ಅವರು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಕೇರಳದ ಜಾತಿ-ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸುಧಾರಣಾ ಚಳುವಳಿಯನ್ನು ನಡೆಸಿದರು .
"ಒಂದು ಜಾತಿ, ಒಂದು ಧರ್ಮ ಮತ್ತು ಎಲ್ಲಾ ಮಾನವರಿಗೆ ಒಂದೇ ದೇವರು" ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ. ಇಂದು ನಾರಾಯಣಗ ಗುರುಗಳ ಜಯಂತಿಯನ್ನು ಆಚರಿಸಲಾಗುತ್ತದೆ.
ನಾರಾಯಣ ಗುರುಗಳ ಜಯಂತಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿ ನಮನಗಳನ್ನು ಸಲ್ಲಿಸಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ನಾರಾಯಣ ಗುರುಗಳದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ದೇವಾಲಯಗಳಿಗೆ ಹೋಗುವ ಹಕ್ಕು ತಮಗಿಲ್ಲವಾದರೆ ಆ ದೇವಾಲಯಗಳನ್ನೇ ನಿಮ್ಮಲ್ಲಿಗೆ ತರುತ್ತೇನೆ ಎಂದು ಘೋಷಿಸಿದ ಗುರುಗಳು, ಅಸ್ಪೃಶ್ಯರಿಗೆ ಪೂಜೆ ಮಾಡುವ ಹಕ್ಕನ್ನು ನೀಡುವ ಮೂಲಕ ಅವರಲ್ಲಿ ಸ್ವಾಭಿಮಾನದ ಜಾಗೃತಿಗೆ ಕಾರಣರಾದರು. ನಾರಾಯಣ ಗುರುಗಳು ತಮ್ಮ ಚಳುವಳಿಯ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವನ್ನಾಗಿ ಬಳಸಿದರು.
ಆಧ್ಯಾತ್ಮ ಗುರುವಾಗಿ ಪಾರಮಾರ್ಥಿಕಕ್ಕಷ್ಟೇ ಅಂಟಿಕೊಳ್ಳದೆ ಲೌಕಿಕವೆನಿಸಿಕೊಂಡ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯನ್ನು ಮಾಡಿ ತೋರಿಸಿದ ನಾರಾಯಣ ಗುರುಗಳಿಗೆ ನನ್ನ ಗೌರವ ಪೂರ್ವಕ ನಮನಗಳು.