ರಾಜ್ಯ ಸರಕಾರ ರೈತರಲ್ಲಿ ನೆಮ್ಮದಿ ತರಲು ಸಾಲಮನ್ನಾ ಯೋಜನೆ ಜಾರಿಗೆ ತಂದಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ.
ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸಾಲ ಮನ್ನಾದಿಂದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯಾಗಿದೆ ಎಂಬುದು ಕೇವಲ ಮಿಥ್ಯ. ರಾಜ್ಯ ಸರಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂ.ಗಳಿಗೂ ಮಿಕ್ಕಿ ಮೊತ್ತವಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು, ಬ್ಯಾಂಕ್ ಗಳು ರೈತರ ಸಾಲ ವಸೂಲಾತಿ ನೆಪದಲ್ಲಿ ಅವರಿಗೆ ನೋಟೀಸ್ ಜಾರಿ ಮಾಡಿ ಭಯ ಹುಟ್ಟಿಸಿದರೆ ಸಹಿಸಲಾಗದು ಎಂದು ಹೇಳಿದರು.
ಮಂಗಳೂರು ಅಭಿವೃದ್ದಿಗೆ ರಾಜ್ಯ ಸರಕಾರ ಎಲ್ಲ ನೆರವು ನೀಡಲಿದೆ. ಆದರೆ, ಕೈಗಾರಿಕೆ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹಾನಿಯಾಗುವ ಯೋಜನೆ ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಬಿ.ಎಂ. ಫಾರೂಖ್, ಮಾಜಿ ಸಚಿವ ರಮಾನಾಥ ರೈ, ಮೇಯರ್ ಭಾಸ್ಕರ್, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಯೋಗೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.