ಹುಬ್ಬಳ್ಳಿ: ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಿಲ್ಲ. ಈ ನಿಟ್ಟಿನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯ ನೆಹರು ಮೈದಾನಕ್ಕೆ ಆಗಮಿಸಿದ್ದು, ಈ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ನೇತೃತ್ವದಲ್ಲಿ 3 ಎಸ್ಪಿ, 5 ಎಸಿಪಿ , 24 ಇನ್ಸ್ ಪೆಕ್ಟರ್, 28 ಪಿಎಸ್‌ಐ, 52 ಎಎಸ್‌ಐ, 100 ಹೋಂ ಗಾಡ್೯, 10 ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಬೈಕ್ ರ್ಯಾಲಿಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡಬೇಕಿತ್ತು. ಇದರ ಜೊತೆಗೆ ಹೊರ ಜಿಲ್ಲೆಗಳಿಂದ ಜಾಥಾ ನಗರ ಪ್ರವೇಶಿಸದಂತೆ, ಬ್ಯಾರಿಕೇಡ್ ಹಾಕಲಾಗಿದೆ. ಶಾಂತಿ ಸುವ್ಯವಸ್ಥೆ ಹಾಗೂ ಟ್ರಾಫಿಕ್ ಜಾಮ್ ಕಾರಣ ಹೇಳಿ ನಿರ್ಬಂಧ ವಿಧಿಸಲಾಗಿದೆ.
ಇದೇವೇಳೆ ಮಾತನಾಡಿದ ಸಂಸದ ಪ್ರಹ್ಲಾದ್ ಜೋಷಿ, ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಸರ್ಕಾರ ಅಡ್ಡಿಪಡಿಸುತ್ತಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡನೀಯ. ಬೈಕ್ ಮೇಲೆ ಬರೋದೆ ಅಪರಾಧ ಎನ್ನುವ ರೀತಿ ಪೊಲೀಸರು ವರ್ತಿಸುತ್ತಿದ್ದಾರೆ. ಸಿದ್ಧರಾಮಯ್ಯ ಮುಸ್ಲಿಮರ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗೆ ಹೊರಟ ಕಾಂಗ್ರೆಸ್ ದೇಶದಲ್ಲಿ ಹೀನಾಯದ ಸ್ಥಿತಿಗೆ ತಲುಪಿದೆ. ಹೀಗೆ ಮುಂದುವರೆದರೆ ರಾಜ್ಯದಲ್ಲಿಯೂ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಲಿದೆ ಎಂದರು.
ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಕ್ರಮಕೈಗೊಳ್ಳಿ. ನಾವು ಏನು ಶಾಂತಿ ಕದಡುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.