ಮೈತ್ರಿ ಸರಕಾರದ ಮೊದಲ ಬಜೆಟ್ ಮಂಡಿಸಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಲವು ಘೋಷಣೆಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ನಾಲ್ಕು ಹೊಸ ತಾಲೂಕುಗಳನ್ನು ಸಿಎಂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸಾವನ್ನು ಹೊಸ ತಾಲ್ಲೂಕುಗಳಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ನಲ್ಲಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಅಯವ್ಯಯ ಮಂಡಿಸಿದ ಅವರು, ಕಲಬುರ್ಗಿ, ವಿಜಯಪುರ, ದಕ್ಷಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರಾವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ದ್ರೋಣ್ ಮೂಲಕ ಸರ್ವೆ ಕಾರ್ಯ ನಡೆಸಲಾಗುವುದು ಎಂದು ಹೇಳಿದ್ದಾರೆ.
ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡಲಾಗುವುದು, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 5 ಕೋಟಿ ರೂ. ಅನುದಾನ ನೀಡಲಾಗುವುದು. ಮುಜರಾಯಿ ಇಲಾಖೆಯ ಜಮೀನುಗಳ ಸರ್ವೆಕಾರ್ಯ ಪ್ರಾರಂಭಿಸಿ, ರಾಜ್ಯದ ವಿವಿಧ ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.