ಬೆಂಗಳೂರು: ಉರಿಬಿಸಿಲಿನಲ್ಲಿ ರಸ್ತೆ ಮಧ್ಯದಲ್ಲಿ ನಿಂತು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಮುಂದೆ ಬರುತ್ತಿರುವ ವಾಹನ ಸವಾರರಿಗೆ ಕೈ ಮುಗಿದು ದಯವಿಟ್ಟು ಸಂಚಾರ ಮಾಡಬೇಡಿ. ಕೊರೋನಾ ತಡೆಗೆ ಕೈ ಜೋಡಿಸಿ ಎಂದು ಮನವಿ ಮಾಡುತ್ತಿದ್ದರೆ, ಸವಾರರು ಪ್ರತಿ ವಂದನೆ ಮಾಡಿ ತಮ್ಮ ಪಾಡಿಗೆ ತಾವು ಮುನ್ನಡೆಯುತ್ತಿದ್ದಾರೆ.
ಇಂತಹದ್ದೊಂದು ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಇದು ಇಂದಿನ ಸ್ಥಿತಿ. ದೇಶದಲ್ಲಿ ಲಾಕ್ ಡೌನ್ ಮಾಡಿ ಆದೇಶ ನೀಡಿದ್ದರೂ ನಾಗರಿಕರು ಮಾತ್ರ ಕಿವಿಗೊಡದೇ ಎಗ್ಗಿಲ್ಲದೇ ಸಾಗುತ್ತಿದ್ದಾರೆ.
ಪರಿಸ್ಥಿತಿ ಹೀಗೇ ಮುಂದುವರಿದರೆ 21 ದಿನಗಳ ಕರ್ಫ್ಯೂ ಕೂಡಾ ಕೊರೋನಾ ರೋಗವನ್ನು ನಿರ್ನಾಮವಾಗಲ್ಲ. ಹೆಚ್ಚಿನ ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ತಮ್ಮ ಪಾಡಿಗೆ ತಮಗೇನೂ ಆಗಲ್ಲ ಎಂಬ ಧಿಮಾಕಿನಿಂದ ಓಡಾಡುತ್ತಿರುವುದರಿಂದಲೇ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಎಲ್ಲದಕ್ಕೂ ಸರ್ಕಾರಗಳನ್ನೇ ದೂಷಿಸಿದರೆ ಪ್ರಯೋಜನವಿಲ್ಲ. ನಮ್ಮ ಜವಾಬ್ಧಾರಿಯನ್ನು ನಾವೇ ನಿಭಾಯಿಸಬೇಕು.
ಈ ವಿಡಿಯೋ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ನಟ ಶಿವರಾಜ್ ಕುಮಾರ್ ಪೊಲೀಸರ ಮಾತನ್ನು ದಯವಿಟ್ಟು ಕೇಳಿ. ನಮಗಾಗಿ, ನಮ್ಮ ಸುರಕ್ಷತೆಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಅವಗಣಿಸಬೇಡಿ. ನಮ್ಮ ಸುರಕ್ಷತೆಗಾಗಿ ಮನೆಯಲ್ಲಿರೋಣ ಎಂದು ಬೇಸರದಿಂದ ಮಾತನಾಡಿದ್ದಾರೆ.