ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೀವ್ರ ಹಾವಳಿ ಸೃಷ್ಟಿಸಿರುವ ಚೀನಾ ಮೂಲದ ಲೋನ್ ಆ್ಯಪ್ ಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಸೈಬರ್ ಪೊಲೀಸರು ಮುಂದಾಗಿದ್ದಾರೆ. ಕೇಂದ್ರ ಸರಕಾರದ ಕಾರ್ಪೊರೇಟ್ ಸಚಿವಾಲಯದ ಸೂಚನೆಯಂತೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೀವ್ರ ಹಾವಳಿ ಸೃಷ್ಟಿಸಿರುವ ಚೀನಾ ಮೂಲದ ಲೋನ್ ಆ್ಯಪ್ ಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಸೈಬರ್ ಪೊಲೀಸರು ಮುಂದಾಗಿದ್ದಾರೆ. ಕೇಂದ್ರ ಸರಕಾರದ ಕಾರ್ಪೊರೇಟ್ ಸಚಿವಾಲಯದ ಸೂಚನೆಯಂತೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಚೀನಾ ಮೂಲದ ಲೋನ್ ಆ್ಯಪ್ ಕಂಪನಿಗಳು ಸ್ಥಳೀಯವಾಗಿ ನಕಲಿ ನಿರ್ದೇಶಕರನ್ನ ನೇಮಿಸಿಕೊಂಡು ಸಾರ್ವಜನಿಕರಿಗೆ ಟಾರ್ಚರ್ ನೀಡುತ್ತಿರುವ ಬಗ್ಗೆ ಭಾರೀ ದೂರುಗಳು ಕೇಳಿಬಂದಿದ್ದವು. ಅಣಬೆಗಳ ರೀತಿ ಹುಟ್ಟಿಕೊಂಡಿರುವ ಲೋನ್ ಆ್ಯಪ್ ಗಳು ಭದ್ರತೆ ಇಲ್ಲದೆ ಲೋನ್ ಕೊಡುವ ನೆಪದಲ್ಲಿ ಜನರಿಗೆ ಟಾರ್ಚರ್ ಕೊಡುತ್ತಿವೆ. ಮೊದಲಿಗೆ ನಗ್ನ ಫೋಟೋ ಪಡೆದು ಕೊನೆಗೆ ಅದನ್ನೇ ಮುಂದಿಟ್ಟು ಕಿರುಕುಳ ನೀಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಭಾರತದಲ್ಲಿ ನಕಲಿ ನಿರ್ದೇಶಕರು, ಚಂದಾದಾರರನ್ನ ನೇಮಿಸಿಕೊಂಡು ವ್ಯವಹಾರ ನಡೆಸುತ್ತಿದ್ದು ಚೈನೀಸ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಅಲ್ಪಾವಧಿ ಮತ್ತು ಯಾವುದೇ ಭದ್ರತೆ ಇಲ್ಲದೆ ಕಡಿಮೆ ಮೊತ್ತದ ಸಾಲ ನೀಡುತ್ತಿರುವ ಆ್ಯಪ್ ಗಳು ಗ್ರಾಹಕರ ಮೇಲೆ ದುಪ್ಪಟ್ಟು ಬಡ್ಡಿ ವಿಧಿಸಿ ಹೈರಾಣು ಮಾಡುತ್ತಿದ್ದವು. ಇದರಿಂದಾಗಿ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದೂ ನಡೆದಿದೆ. ಹಣದ ಅವಶ್ಯಕತೆ ಇರುವವರು ಸುಲಭದಲ್ಲಿ ಸಿಗುವ ಈ ರೀತಿಯ ಆ್ಯಪ್ ಗಳಿಂದ ಹಣ ಪಡೆಯುತ್ತಿದ್ದರು. ಆದರೆ ಇವರ ಮೇಲೆ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ಹಾಗೂ ಬಡ್ಡಿ ವಿಧಿಸುತ್ತಿದ್ದರು. ಹಣ ಕೊಡದೇ ಇದ್ದರೆ ನಗ್ನ ಫೋಟೋಗಳನ್ನು ಹರಿಯಬಿಡುವುದಾಗಿ ಬ್ಲಾಕ್ ಮೇಲ್ ಮಾಡಿ ಅನೈತಿಕ ರೀತಿಯಲ್ಲಿ ಸಾಲ ವಸೂಲಿ ಮಾಡುತ್ತಿದ್ದರು.
ಈ ಜಾಲದ ಪ್ರಮುಖ ಆರೋಪಿಗಳು ವಿದೇಶದಲ್ಲಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ನಿಂದ ದೂರು ಬಂದಿದ್ದು ಅದರಂತೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 35 ಆ್ಯಪ್ ಗಳನ್ನು ಗುರುತಿಸಿ ಸದ್ಯಕ್ಕೆ ದೂರು ನೀಡಲಾಗಿದೆ. ಸಚಿವಾಲಯದ ದೂರಿನಂತೆ ಪೊಲೀಸ್ ಕಮಿಷನರ್ ಮತ್ತು ಸಿಸಿಬಿ ವಿಭಾಗದ ಡಿಸಿಪಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಸಿಸಿಬಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರತ್ಯೇಕ ಏಳು ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಸೇರಿ ದೇಶಾದ್ಯಂತ ಲೋನ್ ಆ್ಯಪ್ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದ್ದು ಹಲವಾರು ಕಡೆ ಎಫ್ಐಆರ್ ದಾಖಲಾಗಿದೆ. ಆದರೆ ಇದರ ಹಿಂದಿನ ರೂವಾರಿಗಳನ್ನು ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ. ಇದೀಗ ಚೀನಾ ಲೋನ್ ಆ್ಯಪ್ ಗಳ ಮೇಲೆ ಕೇಂದ್ರ ಕಾರ್ಪೊರೇಟ್ ಅಫೇರ್ಸ್ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು ತನಿಖೆಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.